ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿ ಮತ್ತು ಸುಗಮ ಆಡಳಿತಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ಚಿಕ್ಕ ಪಾಲಿಕೆಗಳಾಗಿ ವಿಂಗಡಿಸಬೇಕು ಎಂದು ಗ್ರೇಟರ್ ಬೆಂಗಳೂರು ಆಡಳಿತ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಸೋಮವಾರ ಹೇಳಿದರು.
ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪೂರ್ವ ವಲಯದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯ ಕುರಿತು ಸಾರ್ವಜನಿಕರಿಂದ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಅಧ್ಯಕ್ಷ ಅರ್ಷದ್ ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದೇ ವೇದಿಕೆಯಲ್ಲಿ ಸಮನ್ವಯವಿದ್ದರೆ ಉತ್ತಮ ಆಡಳಿತವನ್ನು ಸಾಧಿಸಬಹುದು. ಎಲ್ಲಿ ಮತ್ತು ಯಾವ ಬದಲಾವಣೆಗಳು ಆಗಬೇಕು, ಎಲ್ಲವನ್ನೂ ಚರ್ಚಿಸಿ ಅಂತಿಮಗೊಳಿಸಬಹುದು. ಪ್ರತಿಯೊಬ್ಬರೂ ತಮ್ಮ ಸಲಹೆಗಳನ್ನು ನೀಡು ಸಾಧ್ಯವಾಗುತ್ತದೆ. ನಗರದ ಅಭಿವೃದ್ಧಿಗಾಗಿ, ಬಲಿಷ್ಠ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು. ಇದು ಸಾರ್ವಜನಿಕರಿಗೆ ಸೌಲಭ್ಯಗಳು ಸುಲಭವಾಗಿ ಪಡೆಯುವಂತಿರಬೇಕು ಎಂದು ಹೇಳಿದರು.
ಮಸೂದೆ ಕುರಿತು ಈಗಾಗಲೇ ಚರ್ಚೆಗಳು ನಡೆದಿವೆ. ಸಮಿತಿಯು 17 ಸಭೆಗಳನ್ನು ನಡೆಸಿದೆ. ಪಾಲುದಾರರೊಂದಿಗೂ ಚರ್ಚಿಸಲಾಗಿದೆ. ಹಲವು ಆಯಾಮಗಳಲ್ಲಿ ಚರ್ಚೆ ನಡೆಸಿದ ಬಳಿಕ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ನಗರದ 6 ಸ್ಥಳಗಳಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸಲಾಗುತ್ತಿದೆ. ನಗರ ಆಡಳಿತವು ಸವಾಲಿನದ್ದಾಗಿರುವುದರಿಂದ ಸಾರ್ವಜನಿಕರಿಂದ ಪ್ರಮುಖ ಸಲಹೆಗಳನ್ನು ಪಡೆಯಲಾಗುತ್ತಿದೆ. ಮೇಯರ್ ಅವಧಿಯನ್ನು ವಿಸ್ತರಿಸುವ ಅಗತ್ಯವೂ ಇದ್ದು, ಅದನ್ನು ಆಡಳಿತ ಸುಧಾರಣಾ ಕಾಯ್ದೆಯ ಮೂಲಕ ಮಾಡಬೇಕಾಗಿದೆ. ನಗರವನ್ನು ಪುನರ್ನಿರ್ಮಿಸಬೇಕಾಗಿದೆ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವಿಪತ್ತು ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಸದನದಲ್ಲಿ ಮಸೂದೆ ಮಂಡಿಸಿ, ಒಪ್ಪಿಗೆ ಪಡೆದ ನಂತರ ಚುನಾವಣಾ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಹೇಳಿದರು.