ಬೆಂಗಳೂರು ಅರಮನೆ ಮೈದಾನದಲ್ಲಿ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಮೂರು ದಿನಗಳ ಸಮಾವೇಶದಲ್ಲಿ ಪ್ರತಿಷ್ಠಿತ ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದ, ವಿಚಾರ ಸಂಕಿರಣ ನಡೆಯಲಿದೆ. 'ಪ್ರಗತಿಯ ಮರುಕಲ್ಪನೆ' ಥೀಮ್ ನೊಂದಿಗೆ ನಡೆಯುತ್ತಿರುವ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ. 75 ಕ್ಕೂ ಹೆಚ್ಚು ಮಳಿಗೆಗಳು, 25 ಕ್ಕೂ ಹೆಚ್ಚು ತಾಂತ್ರಿಕ ಸೆಷನ್‌ಗಳು, 10 ಕ್ಕೂ ಹೆಚ್ಚು ದೇಶದ ಸೆಷನ್ಸ್ ಮತ್ತು SME ಸಂಬಂಧಿತ ಚರ್ಚೆಗಳನ್ನು ಒಳಗೊಂಡಿರುವ ಸಮಾವೇಶವು ಜಾಗತಿಕ ಆರ್ಥಿಕ ಪ್ರವೃತ್ತಿಗಳು, ಹೊಸ ತಂತ್ರಜ್ಞಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹಾಕಿದ್ದ ಮೈಸೂರಿನ ಕಲ್ಯಾಣಗಿರಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸುರೇಶ್ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟಿದ್ದ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆದ ಹಿನ್ನೆಲೆಯಲ್ಲಿ ಉದಯಗಿರಿ ಪೊಲೀಸ್ ಠಾಣೆ ಮುಂಭಾಗ ಮುಸ್ಲಿಂ ಸಮುದಾಯದ ಪ್ರಮುಖರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ಘರ್ಷಣೆಯಲ್ಲಿ ಏಳು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮೈಸೂರು ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ.
ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದ ಸಂಬಂಧ ಶಿವಮೊಗ್ಗದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಶಿವಮೊಗ್ಗ ಎಫ್ಐಆರ್ ದಾಖಲಾಗಿದೆ. ಶಾಸಕನ ಪುತ್ರನ ಹೆಸರು ಉಲ್ಲೇಖಿಸದೇ 6-7 ಜನರ ವಿರುದ್ಧ FIR ದಾಖಲು ಮಾಡಲಾಗಿದೆ. ಶಾಸಕನ ಪುತ್ರ ಅಧಿಕಾರಿಯನ್ನು ನಿಂದಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಭದ್ರಾವತಿಯ ಸೀಗೇಬಾಗಿ ಬಳಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ನಿನ್ನೆ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಹಾಯಕರ ಮೊಬೈಲ್ ಮೂಲಕ ರೆಕಾರ್ಡ್ ಮಾಡಲಾದ ಫೋನ್ ಸಂಭಾಷಣೆಯಲ್ಲಿ ಬಸವೇಶ್ ಅಧಿಕಾರಿ ಜ್ಯೋತಿ ವಿರುದ್ಧ ಅಶ್ಲೀಲ ಭಾಷೆ ಮತ್ತು ಬೆದರಿಕೆ ಹಾಕಿರುವುದು ಕಂಡುಬಂದಿದೆ.
ಕಾಫಿ ಕೊಯ್ಲಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದು ಹಲವು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ನಿಂದ ಮಡಿಕೇರಿ ಜಿಲ್ಲೆಯ ಶನಿವಾರಸಂತೆಯ ಬಳಿಯ ಕಾಫಿ ಎಸ್ಟೇಟೊಂದಕ್ಕೆ ಒಂದು ಪುಟ್ಟ ಮಗು ಸೇರಿದಂತೆ 14 ಜನ ಕೂಲಿ ಕಾರ್ಮಿಕರಿದ್ದ ಈ ವಾಹನ ತೆರಳುತ್ತಿತ್ತು. ಮತ್ತೊಂದೆಡೆ, ಎತ್ತಿನಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ.
ಬೆಂಗಳೂರು ಮೆಟ್ರೋ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಸಂಸತ್ ನಲ್ಲಿಯೂ ಪ್ರತಿಧ್ವನಿಸಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ತೇಜಸ್ವಿ ಸೂರ್ಯ ಮೆಟ್ರೋ ದರಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮಧ್ಯಮ ವರ್ಗಕ್ಕೆ ಉಂಟಾಗುತ್ತಿರುವ ಅನಾನುಕೂಲದ ಬಗ್ಗೆ ಸರ್ಕಾರದ ಗಮನ ಸೆಳೆದರು. ನಮ್ಮ ಮೆಟ್ರೋನಲ್ಲಿ ಕಡಿಮೆ ಅಂತರದ ಸ್ಥಳಗಳಿಗೆ ಪ್ರಯಾಣಿಸುವವರಿಗೂ ಶೇ.100 ರಷ್ಟು ಪ್ರಯಾಣ ದರ ಏರಿಕೆಯಾಗಿದೆ. ಇದರಿಂದಾಗಿ ಮೆಟ್ರೋ ಪ್ರಯಾಣ ದುಬಾರಿಯಾಗಿದ್ದು ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆ ಪರಿಹಾರವಾಗಿರುವ ಮೂಲ ಉದ್ದೇಶಕ್ಕೇ ಧಕ್ಕೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ದರ ರಚನೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವಿಷಯವಾಗಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ತೇಜಸ್ವಿ ಸೂರ್ಯ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.