ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪ್ರಯಾಣಿಕರು, ಈ ವಿಚಾರವಾಗಿ ಬಿಎಂಆರ್ ಸಿಎಲ್ ಬಿಸಿ ಮುಟ್ಟಿಸಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗಿದೆ.
ಹೌದು.. ನಿತ್ಯ ಸುಮಾರು 8.5 ಲಕ್ಷ ಪ್ರಯಾಣಿಕರು ಓಡಾಡುತ್ತಿದ್ದ ಮೆಟ್ರೋ ರೈಲಿನಲ್ಲಿ ಇದೀಗ 7.5 ಲಕ್ಷ ಮಂದಿ ಪ್ರಯಾಣಿಕರು ಮಾತ್ರ ಓಡಾಡುತ್ತಿದ್ದಾರೆ. ಅಂದರೆ ಸುಮಾರು 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋ ತೊರೆದಿದ್ದಾರೆ ಎಂದು ಹೇಳಲಾಗಿದೆ. ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 35ರಿಂದ 40 ರಷ್ಟು ಕುಸಿತ ಕಂಡುಬಂದಿದೆ.
ಕಳೆದ ಫೆಬ್ರವರಿ 5 ಬುಧವಾರದಂದು ಅಂದರೆ ದರ ಏರಿಕೆಗೂ ಮುನ್ನ ನಮ್ಮ ಮೆಟ್ರೋದಲ್ಲಿ 8,67, 660 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದರು. ದರ ಏರಿಕೆ ಬಳಿಕ ಅಂದರೆ ಫೆಬ್ರವರಿ 12 ಬುಧವಾರದಂದು 7, 62,811 ಮಂದಿ ಪ್ರಯಾಣಿಕರ ದಾಖಲಾಗಿದೆ. ಅಂದರೆ 1,04,749 ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಮೆಟ್ರೋ ಪ್ರಯಾಣಿಕರಿಂದ ನಿತ್ಯ ಬಿಎಂಆರ್ ಸಿಎಲ್ ಗೆ 2 ರಿಂದ 2.5 ಕೋಟಿ ರೂ ಸಂಗ್ರಹವಾಗುತ್ತಿತ್ತು.
ಮೆಟ್ರೋ ಪ್ರಯಾಣ ದರ ಏರಿಕೆ ಫೆ.9ರಿಂದಲೇ (ಭಾನುವಾರ) ಅನ್ವಯವಾಗಿತ್ತು. ದರ ಏರಿಕೆಯ ಮೊದಲಿನ ಸೋಮವಾರಗಳಿಗೆ ಹೋಲಿಸಿದರೆ, ಫೆ.10 ರಂದು(ಸೋಮವಾರ) ಮೆಟ್ರೋದಲ್ಲಿ ಪ್ರಯಣಿಸಿದವರ ಸಂಖ್ಯೆ ಕಡಿಮೆಯಾಗಿದೆ. ಫೆ.3ರಂದು 8.7ಲಕ್ಷ ಜನ ಪ್ರಯಾಣಿಸಿದ್ದರು, ಅದೇ ಫೆ.10ರಂದು 8.2ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆಯೇ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ.
ಫ್ರೀ ಬಸ್ ಮೊರೆ, ಶಕ್ತಿ ಯೋಜನೆಯತ್ತ ಪ್ರಯಾಣಿಕರು
ಇನ್ನು ಮೆಟ್ರೋ ಪ್ರಯಾಣದರ ಹೆಚ್ಚಳವು ಶ್ರೀಮಂತ ವರ್ಗಕ್ಕೆ ಹೆಚ್ಚೇನು ವ್ಯತ್ಯಾಸವಾಗದೇ ಇದ್ದರೂ, ಕೆಳ ಮಧ್ಯಮ ವರ್ಗ ಮತ್ತು ಬಡವರ ಪಾಲಿಗೆ ಹೊರೆಯಾಗಿದೆ.
ಈ ಹಿನ್ನೆಲೆಯಲ್ಲಿ ಹಲವರು ಮೆಟ್ರೋ ಕೆಲವರು ಖಾಸಗಿ ವಾಹನಗಳ ಮೊರೆ ಹೋದರೆ, ಉಳಿದವರು ಬಿಎಂಟಿಸಿಯೆಡೆಗೆ ಪ್ರಯಾಣ ಬೆಳೆಸಿದ್ದಾರೆ. ಮೆಟ್ರೋ ಪ್ರಯಾಣಿಕರ ಸರಾಸರಿ ಸಂಖ್ಯೆಯು 1 ಲಕ್ಷದಷ್ಟು ಇಳಿಕೆಯಾಗಿದೆ. ಇದೇ ವೇಳೆ ಬಿಎಂಟಿಸಿಯಲ್ಲಿ ಸರಾಸರಿ 1 ಲಕ್ಷ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇದರಲ್ಲಿ ಬಹುತೇಕ ಮಹಿಳಾ ಪ್ರಯಾಣಿಕರೇ ಇದ್ದು, ಪರೋಕ್ಷವಾಗಿ ಶಕ್ತಿ ಯೋಜನೆಗೆ ಬಲಬಂದಂತಾಗಿದೆ.
ಫೆ.10ರಂದು(ಸೋಮವಾರ) ಬಿಎಂಟಿಸಿಯಲ್ಲಿ ಒಟ್ಟು 22,17,886 ಮಂದಿ ಪ್ರಯಾಣಿಸಿದ್ದಾರೆ. ಫೆ.11ರಂದು(ಮಂಗಳವಾರ) 23,59,813 ಜನರು ಪ್ರಯಾಣಿಸಿದ್ದಾರೆ. ಒಂದು ದಿನದ ಅಂತರದಲ್ಲಿ ಒಟ್ಟು 1.41 ಲಕ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದ ರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಅಧಿಕವಾಗಿದೆ.
ಖಾಸಗಿ ವಾಹನ ಸಂಖ್ಯೆ ಏರಿಕೆ
ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಖಾಸಗಿ ವಾಹನ ಸಂಚಾರವೇ ಅಗ್ಗವಾದ್ದರಿಂದ ಹಲವರು ಖಾಸಗಿ ವಾಹನಗಳನ್ನು ಬಳಸಲು ಮುಂದಾಗಿದ್ದಾರೆ. ಖಾಸಗಿ ವಾಹನಗಳು ಹೆಚ್ಚು ರಸ್ತೆಗಿಳಿಯುವುದರಿಂದ ನಗರದಲ್ಲಿ ವಾಹನ ದಟ್ಟಣೆಯು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿಂದೆ ಸಂಚಾರ ದಟ್ಟಣೆಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಆರಂಭವಾದ ಮೆಟ್ರೋ ತನ್ನ ನೈಜ ಉದ್ದೇಶವನ್ನೇ ಮರೆಯುತ್ತಿದೆ ಎಂಬ ಟೀಕೆಗಳೂ ವ್ಯಕ್ತವಾಗುತ್ತಿದೆ.