ಮಂಡ್ಯ: ದೇವರ ಕಾರ್ಯಕ್ಕೆಂದು ತೆರಳಿದ್ದ ಇಬ್ಬರು ಯುವತಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮುತ್ತತ್ತಿಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಕನಕಪುರ ತಾಲೂಕಿನ ಗಾಣಾಳು ಗ್ರಾಮದ ಶೋಭಾ (23) ನದೀಯಾ (19) ಎಂದು ಗುರುತಿಸಲಾಗಿದೆ.
ಮಳವಳಿ ತಾಲೂಕಿನ ಹಲಗೂರಿನ ಮುತ್ತತ್ತಿಯ ಆಂಜನೇಯ ಸ್ವಾಮಿ ದೇವರ ಕಾರ್ಯಕ್ಕೆಂದು ಗಾಣಾಳು ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಮಂದಿ ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಹಲಗೂರು ಪೊಲೀಸರು ಸ್ಥಳಕ್ಕಾಗಿಮಿಸಿದ್ದು, ಇಬ್ಬರ ಶವವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಬೆಂಗಳೂರು-ಜಲಾಸೂರು ರಾಜ್ಯ ಹೆದ್ದಾರಿ ಬಳಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ 80 ವರ್ಷದ ರಂಗೇಗೌಡ ಎಂಬುವರು ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಅವರು ಬೈಕ್ ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಕುರಿತು ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.