ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಂಧ್ರಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಬರೊಬ್ಬರಿ 119 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರ ಪ್ರದೇಶದಿಂದ ಮಂಗಳೂರು ಹಾಗೂ ಕೇರಳಕ್ಕೆ 119 ಕೆಜಿ ಗಾಂಜಾ ಸಾಗಿಸಲು ಯತ್ನಿಸುತ್ತಿದ್ದ ತಂಡವನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, 119 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕಾಸರಗೋಡು ಜಿಲ್ಲೆ ನಿವಾಸಿ ಮೊಯ್ದಿನ್ ಶಬ್ಬಿರ್ (38 ವರ್ಷ), ಆಂದ್ರಪ್ರದೇಶ ನಿವಾಸಿ ಮಹೇಶ್ ದ್ವಾರಿಕಾನಾಥ ಪಾಂಡೆ (30 ವರ್ಷ), ಕೇರಳ ರಾಜ್ಯದ ಅಜಯ್ ಕೃಷ್ಣ (33 ವರ್ಷ), ಹರಿಯಾಣ ರಾಜ್ಯದ ಜೀವನ್ ಸಿಂಗ್ (35 ವರ್ಷ) ಎಂದು ಗುರುತಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿಗಳು ಮಂಗಳೂರು ನಗರಕ್ಕೆ ಅಂಧ್ರಪ್ರದೇಶ ರಾಜ್ಯದಿಂದ ಟಾಟಾ 407 ಗೂಡ್ಸ್ ಟೆಂಪೋ ವಾಹನದಲ್ಲಿ ಹಾಗೂ ಮಾರುತಿ ಆಲ್ಟೋ ಕಾರಿನಲ್ಲಿ ನಿಷೇಧಿತ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ 2 ವಾಹನಗಳನ್ನು ಪತ್ತೆ ಹಚ್ಚಿ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದನ್ನು ಪತ್ತೆ ಮಾಡಿದ್ದಾರೆ. ಬಂಧಿತರಿಂದ 35 ಲಕ್ಷ ಮೌಲ್ಯದ 119 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ದ ಕೇರಳದಲ್ಲೂ ಪ್ರಕರಣ
ಅಂತೆಯೇ ಬಂಧಿತ ಆರೋಪಿಗಳ ಪೈಕಿ ಓರ್ವನಾಗಿರುವ ಮೊಯಿದ್ದೀನ್ ಶಬ್ಬಿರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದಲ್ಲೂ ಹಲವು ಪ್ರಕರಣಗಳು ದಾಖಲಾಗಿವೆ. ಕೇರಳದ ಕಾಸರಗೋಡು ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ದನಕಳ್ಳತನ, ಹಲ್ಲೆ, ಕೊಲೆ ಹೀಗೆ ಒಟ್ಟು 12 ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೇ ಆಂಧ್ರಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿದೆ. 2023ರಲ್ಲಿ ಸಿಸಿಬಿ ಪೊಲೀಸರ ತಂಡ ದಸ್ತಗಿರಿ ಮಾಡಿ ಆತನಿಂದ 23.250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈತ ಸುಮಾರು ಒಂದೂವರೆ ವರ್ಷ ಜೈಲ್ ನಲ್ಲಿದ್ದು, ಸುಮಾರು 6 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡವನು ಪುನಃ ಅದೇ ಗಾಂಜಾ ಸಾಗಾಟ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಇನ್ನೋರ್ವ ಆರೋಪಿ ಮಹೇಶ್ ದ್ವಾರಿಕಾನಾಥ ಪಾಂಡೆ ಎಂಬಾತನ ವಿರುದ್ಧ ಆಂಧ್ರಪ್ರದೇಶದ ರಾಜಮಂಡ್ರಿ ಎಂಬಲ್ಲಿ 2 ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ. ಅಜಯ್ ಕೃಷ್ಣನ್ ಎಂಬಾತನ ವಿರುದ್ಧ ಅಲಪ್ಪುಳಂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಹಲ್ಲೆ, ಗಾಂಜಾ ಮಾರಾಟ, ಹಾಗೂ ನಕಲಿ ಚಿನ್ನವನ್ನು ಬ್ಯಾಂಕ್ ನಲ್ಲ ಅಡವಿರಿಸಿ ವಂಚನೆ ಮಾಡಿರುವ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿ ಜೀವನ್ ಸಿಂಗ್ ಎಂಬಾತನ ವಿರುದ್ಧ ಅಂಧ್ರಪ್ರದೇಶದ ಮೊತುಕುಡಮ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣವೊಂದು ದಾಖಲಾಗಿರುತ್ತದೆ. ಆರೋಪಿಗಳು ಕರ್ನಾಟಕ, ಕೇರಳ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಆಂಧ್ರಪ್ರದೇಶದಿಂದ ಗಾಂಜಾವನ್ನು ಖರೀದಿಸಿಕೊಂಡು ಮಂಗಳೂರು ನಗರಕ್ಕೆ ಹಾಗೂ ಕೇರಳಕ್ಕೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್ ಮತ್ತು ಇನ್ಸ್‌ಪೆಕ್ಟರ್ ರಫೀಕ್ ಕೆ ಎಂ, ಪಿಎಸ್‌ಐ ಶರಣಪ್ಪ ಭಂಡಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.