ಯಾದಗಿರಿ: ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಚರಂಡಿ ಸ್ವಚ್ಚಗೊಳಿಸಿದ ಘಟನೆಯೊಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಶಾಲಾ ಮಕ್ಕಳು ಸಮವಸ್ತ್ರದಲ್ಲೇ ಶಾಲೆಯ ಬಳಿಯ ಕೊಳವೆಬಾವಿ ಸುತ್ತಲಿನ ಚರಂಡಿ (ಪಾಚಿಗಟ್ಟಿದ ಸ್ಥಳ) ಸ್ವಚ್ಚಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲೆಯ ಮುಖ್ಯೋಪಾಧ್ಯಾಯರೇ ಮಕ್ಕಳ ಕೈಗೆ ಸಲಕರಣೆ ಕೊಟ್ಟು ಸ್ವಚ್ಚಗೊಳಿಸಲು ಸೂಚಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಘಟನೆಯ ಬಗ್ಗೆ ತಿಳಿದ ತಕ್ಷಣ, ಶಾಲಾ ಶಿಕ್ಷಣ ಉಪ ನಿರ್ದೇಶಕ ಸಿ ಎಸ್ ಮುಧೋಳ ಶಹಾಪುರ ತಾಲ್ಲೂಕಿನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಶಹಾಪುರದ ಬಿಇಒ ವೈ ಎಚ್ ಹರಗಿ ಪ್ರತಿಕ್ರಿಯೆ ನೀಡಿದ್ದು, ಶಾಲೆಯ ಮುಂದೆ ಬಿದ್ದಿದ್ದಹಾಗೂ ಬೋರ್‌ವೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಕಸ ತೆರವುಗೊಳಿಸಲು ಶಾಲೆಯ ಮುಖ್ಯೋಪಾಧ್ಯಾಯರು ಶಾಲಾ ಮಕ್ಕಳಿಗೆ ಸೂಚಿಸಿದ್ದರು ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ. ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಬಿಇಒ ಕಚೇರಿಯ ಸಮನ್ವಯ ಅಧಿಕಾರಿ ಶಹಾಪುರ ರೇಣುಕಾ ಪಾಟೀಲ್, ಬಿಇಒ ಕಚೇರಿಯ ಶಿಕ್ಷಣ ಸಂಚಾಲಕ ಶಹಾಪುರ ಮಲ್ಲಿಕಾರ್ಜುನ್ ಮತ್ತು ಸಮುದಾಯ ಸಂಪನ್ಮೂಲ ಕೇಂದ್ರದ ಸಮುದಾಯ ಸಂಪನ್ಮೂಲ ವ್ಯಕ್ತಿ ಕುರ್ಕುಂದ ಮಲಕಪ್ಪ ಅವರನ್ನೊಳಗೊಂಡ ಸಮಿತಿಯನ್ನು ನೇಮಿಸಲಾಗಿದೆ. ಸಮಿತಿಯು ವಿಚಾರಣೆ ನಡೆಸಲಿದೆ. ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ವಿಚಾರ ತಿಳಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಯಾದಗಿರಿ ಜಿಲ್ಲಾ ಉಸ್ತುವಾರಿ ಶಶಿಧರ್ ಕೊಸಂಬೆ ಅವರು ಯಾದಗಿರಿಯ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು,
ಅಧಿಕಾರಿಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದೆ ಎಂದು ಹೇಳಿದರು.
ಅಲ್ಲದೆ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಬುಧವಾರ ಶಾಲೆಗೆ ಭೇಟಿ ನೀಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿಸಿದರು.