ಬೆಂಗಳೂರು: ಸ್ಟಾರ್ಟ್ ಅಪ್‌ಗಳನ್ನು ಉತ್ತೇಜಿಸಲು 75 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಸ್ಥಾಪಿಸಲು ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು, ನವೋದ್ಯಮಗಳಿಗೆ 75 ಕೋಟಿ ರೂ. ಮೊತ್ತದಲ್ಲಿ ಕ್ಲಸ್ಟರ್ ಸೀಡ್ ಫಂಡ್ ಸ್ಥಾಪನೆ ಮಾಡಲಾಗಿದೆ. ಕ್ಲಸ್ಟರ್ ಸೀಡ್ ಫಂಡ್ ಸ್ಥಾಪನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ 37.98 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಹುನಗುಂದದಲ್ಲೂ ಆಸ್ಪತ್ರೆ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲೆಯ ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲಾ ಗ್ರಾಮದಲ್ಲಿರುವ ಹಜರತ್ ಫಖೀ-ಷಾ-ವಲೆ -ಅಮ್ಮಾಜಾನ್ ಬಾವಾಜಾನ್ ದರ್ಗಾದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ 31.99 ಕೋಟಿ ರೂ. ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಕಟ್ಟಡವನ್ನು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಶಹಾಪೂರ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ನಿಗಮದ 198.35 ಚ.ಮೀ ಜಾಗವನ್ನು ಉಚಿತವಾಗಿ ಒದಗಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.