ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳಿಗಾಗಿ KPSC ಎರಡು ಬಾರಿ ನಡೆಸಿದ ಪೂರ್ವ ಭಾವಿ ಪರೀಕ್ಷೆಯಲ್ಲಿ ಭಾರಿ ಯಡವಟ್ಟು, ಲೋಪದೋಷಗಳಿದ್ದರೂ ಅದನ್ನು ಸರಿಪಡಿಸದೆ ನೇಮಕಾತಿ ಪ್ರಕ್ರಿಯೆ ಮುಂದುವರೆಸದಂತೆ ಕರ್ನಾಟಕ ರಾಜ್ಯ ಆಡಳಿತ ಮಂಡಳಿ (KSAT)ಮಧ್ಯಂತರ ತಡೆ ನೀಡಿದೆ.
ಆಗಸ್ಟ್ 2024, ಡಿಸೆಂಬರ್ 29 ಎರಡು ಬಾರಿ ಪರೀಕ್ಷೆ ನಡೆಸಿದರೂ ಸಹ ಪ್ರಶ್ನೆಪತ್ರಿಕೆ ಭಾಷಾಂತರದಲ್ಲಿ ಯಡವಟ್ಟು ಕಾರಣ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಹಲವು ಕನ್ನಡ ಪರ ಸಂಘಟನೆಗಳು ಹಾಗೂ ಪ್ರತಿಪಕ್ಷ ಬಿಜೆಪಿ ಕೂಡಾ ಪ್ರತಿಭಟನೆ ವ್ಯಕ್ತಪಡಿಸುತ್ತಿವೆ.
ಆದರೆ, ಇದ್ಯಾವುದಕ್ಕೂ ಗಮನ ಕೊಡದ KPSC ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಿತ್ತು. ಅಲ್ಲದೇ, ಜನವರಿ 29 ರಂದು ಮುಖ್ಯ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತ್ತು.
ಈ ಸಂಬಂಧ ಡಿ. ಪವಿತ್ರಾ ಮತ್ತಿತರ 51 ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೆಎಸ್ ಎಟಿ ನ್ಯಾಯಾಂಗ ಸದಸ್ಯ ಎಸ್. ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠ, ಈ ಕುರಿತು ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದೆ.
ಈ ಹಿಂದಿನ ದೋಷಗಳನ್ನು ಸರಿಪಡಿಸದೆ ಮುಖ್ಯ ಪರೀಕ್ಷೆ ನಡೆಸಲು KPSC ಹೇಗೆ ಅಧಿಸೂಚನೆ ಹೊರಡಿಸಿದೆ ಎಂದು ಪ್ರಶ್ನಿಸಿರುವ ಪೀಠ, ಆಯೋಗ ಜನವರಿ 29 ರಂದು ಹೊರಡಿಸಿದ್ದ ಮುಖ್ಯ ಪರೀಕ್ಷೆ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಅಮಾನತ್ತಿನಲ್ಲಿ ಇರಿಸುವಂತೆ ಆದೇಶಿಸಿದೆ. ಪ್ರಶ್ನೆಪತ್ರಿಕೆ ಭಾಷಾಂತರದಲ್ಲಿ ದೋಷಗಳಾಗಿದ್ದು, ಈ ವಿಚಾರವನ್ನು ಬಗೆಹರಿಸುವಂತೆ ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ಸಲಹೆ ನೀಡಲಾಗಿದೆ ಎಂಬ ಅಂಶವನ್ನು ಪೀಠ ಉಲ್ಲೇಖಿಸಿದೆ.