ಬೆಂಗಳೂರು: ಪತ್ನಿಯ ಮೇಲೆ ಹಲ್ಲೆ ನಡೆಸಿ, ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಬಸ್ ಚಾಲಕ ಕಿಶೋರ್ (38) ಕೊಲೆಯಾದ ವ್ಯಕ್ತಿ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಅರುಂಧತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಂಧತಿ ಪತಿ ಯಲ್ಲಪ್ಪ, ಅವರ ಮಗಳು ಪೂಜಾ ಮತ್ತು ಸಹೋದರ ವೆಂಕಟರಮಣ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಕಾಡುಗೋಡಿ ಬಳಿಯ ಮನೆಯೊಂದರಲ್ಲಿ ಗುರುವಾರ ಮಧ್ಯಾಹ್ನ ಅರುಂಧತಿ ಮತ್ತು ಕಿಶೋರ್ ಒಟ್ಟಿಗೆ ಇದ್ದರು. ಈ ಮಾಹಿತಿ ತಿಳಿದ ಯಲ್ಲಪ್ಪ, ತನ್ನ ಮಗಳು ಹಾಗೂ ಬಾಮೈದನ ಜತೆ ಅಲ್ಲಿಗೆ ತೆರಳಿ, ಕಿಶೋರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪತ್ನಿ ಮೇಲೂ ಹಲ್ಲೆ ನಡೆಸಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮದುವೆಯಾಗಿರುವ ಕಿಶೋರ್ ಖಾಸಗಿ ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು, ಅರುಂಧತಿ ಜೊತೆ ಸಲುಗೆಯಿಂದ ಇದ್ದರು. ಈ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ ಜಗಳ ನಡೆದಿತ್ತು. ಆತನಿಂದ ದೂರ ಇರುವಂತೆ ಪತ್ನಿಗೆ ಆರೋಪಿ ಎಚ್ಚರಿಕೆ ನೀಡಿದ್ದ.
ಆದರೂ ಇಬ್ಬರು ಭೇಟಿಯಾಗುತ್ತಿದ್ದರು. ಇದರಿಂದ ಬೇಸತ್ತು ಕೃತ್ಯವೆಸಗಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ವೆಂಕಟರಮಣ ಆಟೋ ನಡೆಸುತ್ತಿದ್ದರು. ಯಲ್ಲಪ್ಪ ಕೋಲಾರದ ಶ್ರೀನಿವಾಸಪುರದಲ್ಲಿರುವ ತನ್ನ ಜಮೀನನ್ನು ನೋಡಿಕೊಳ್ಳುತ್ತಿದ್ದರು.