ಬೆಳಗಾವಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತವಾಗಿರುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿದ್ದು, ಬೆಳಗಾವಿಯಲ್ಲಿ ನಡೆದಿರುವ ಘಟನೆಗಳ ಕುರಿತಂತೆ ಕರ್ನಾಟಕ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳುವವರೆಗೆ ನಮ್ಮ ಆಡಳಿತದೊಂದಿಗೆ ಚರ್ಚೆಯಲ್ಲಿ ತೊಡಗುವವರೆಗೆ, ರಾಜ್ಯದಿಂದ ಕರ್ನಾಟಕಕ್ಕೆ ತೆರಳುವ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‌ನಾಯಕ್ ಹೇಳಿದ್ದಾರೆ. ಬೆಳಗಾವಿಯ ಘಟನೆ ಖಂಡಿಸಿ ಚಿತ್ರದುರ್ಗದಲ್ಲಿ ಕನ್ನಡ ಪರ ಕಾರ್ಯಕರ್ತರು ಎಂಎಸ್‌ಆರ್‌ಟಿಸಿ ಬಸ್ ಮೇಲೆ ದಾಳಿ ಮಾಡಿದ ನಂತರ ಮಹಾರಾಷ್ಟ್ರ ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಚಾಲಕ ಭಾಸ್ಕರ್ ಜಾಧವ್ ಮೇಲೆ ಹಲ್ಲೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಶನಿವಾರ ತಡರಾತ್ರಿ ಲೈವ್ ಬ್ಯಾಂಡ್‌ನಿಂದ ಹೊರ ಬರುತ್ತಿದ್ದ ಕಾಂಗ್ರೆಸ್ ಮುಖಂಡನನ್ನು ಅಡ್ಡಗಟ್ಟಿ ಭೀಕರ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅಶೋಕನಗರದ ಗರುಡ ಮಾಲ್ ಬಳಿ ನಡೆದಿದೆ. ಶೇಖ್ ಹೈದರ್ ಅಲಿ ಕೊಲೆಯಾದ ಕಾಂಗ್ರೆಸ್ ಮುಖಂಡ. ಹೈದರ್ ಅಲಿ ಲೈವ್ ಬ್ಯಾಂಡ್‌ನಿಂದ ರಾತ್ರಿ ಸ್ನೇಹಿತನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆರೋಪಿಗಳು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ತದ ಮಡುವಲ್ಲಿ ಬಿದಿದ್ದ ಹೈದರ್ ಅವರನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆಗೆ ಆತ ಮೃತಪಟ್ಟಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಊಹಾಪೋಹಗಳ ನಡುವೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕಾರ್ಯಕರ್ತರು ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಆಗುತ್ತಿಲ್ಲ. ನೀವು ಹೇಳಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿಗೆ ತೆರಳಿದ್ದ ಪರಮೇಶ್ವರ್, ರಾಜ್ಯದಲ್ಲಿ ಉನ್ನತ ಸ್ಥಾನದ ಬದಲಾವಣೆಯಾದರೆ ತಮ್ಮನ್ನೂ ಪರಿಗಣಿಸಬೇಕೆಂದು ಹೇಳಿದ್ದರು. ಈ ಬೆನ್ನಲ್ಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಚಾಮುಂಡಿ ಬೆಟ್ಟದಲ್ಲಿ ಮಾನವನ ಅಜಾಗರೂಕತೆಯಿಂದ ಉಂಟಾದ ಬೆಂಕಿ ಚಾಮುಂಡಿ ಬೆಟ್ಟವನ್ನು ಆವರಿಸಿದ್ದು, ದೇವಿಕೆರೆ, ಗೊಲ್ಲಹಳ್ಳಿ ಭಾಗದಲ್ಲಿ 35 ಎಕರೆ ಕಾಡು ಸಂಪೂರ್ಣ ಸುಟ್ಟು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉದ್ದೇಶ ಪೂರ್ವಕವಾಗಿ ಬೆಂಕಿ ಹಾಕಿದ್ದಾರೆ. ಆ ಬಗ್ಗೆ ತನಿಖೆ ನಡೆಯುತ್ತಿದೆ ಗಾಳಿ ವೇಗ ಹಾಗೂ ಬಿಸಿಲಿನ ವಾತಾವರಣ ಇದ್ದುದರಿಂದ ಬೆಂಕಿ ಹೆಚ್ಚಿತ್ತು ನಾವು ಎಷ್ಟೇ ಪ್ರಯತ್ನ ಪಟ್ಟರೂ ಆ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮ ಹಾಕಿದ್ದಾರೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ವಾಚರ್ ಕಣ್ಣಿಗೆ ಚಿರತೆ ಹಾಗೂ ಮರಿಗಳು ಬಿದ್ದಿದೆ. ಬೆಂಕಿ ಬಿದ್ದ ತಕ್ಷಣ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಭಾಗಕ್ಕೆ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವರಾತ್ರಿಗಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪಾದಚಾರಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಮೃತರು ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರಾಗಿದ್ದು, ಘಟನೆಯಲ್ಲಿ ಗಂಭೀರ ಗಾಯಗಳಿಗೀಡಾದ ದಿನೇಶ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ನಗರದ ಹೊರ ವಲಯದ ಎಚ್ ಕೆಎಸ್ ಇಂಟರನ್ಯಾಷನಲ್ ಶಾಲೆ ಬಳಿ ಘಟನೆ ನಡೆದಿದ್ದು, ಆತಂಕಗೊಂಡ ಬಸ್ ಚಾಲಕ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.