ಬೆಳಗಾವಿಯಲ್ಲಿ ಬಸ್ ಪ್ರಯಾಣಿಕರೊಬ್ಬರಿಗೆ ಕನ್ನಡ ಮಾತನಾಡು ಎಂದು ಹೇಳಿದ್ದಕ್ಕೆ ಕೆಎಸ್ ಆರ್ ಟಿಸಿ ನಿರ್ವಾಹಕನ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾಷಾ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ ಗಳನ್ನು ಅಲ್ಲಿನ ಮರಾಠಿ ಪುಂಡರು ಗುರಿಯಾಗಿಸಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್ ಗಳಿಗೆ ಮಸಿ ಬಳಿದಿದ್ದಾರೆ. ಸೋಲಾಪುರ ಪಟ್ಟಣದಲ್ಲಿ ಬಸ್ ವಿಂಡ್ ಸ್ಕ್ರೀನ್ ಮೇಲೆ 'ಜೈ ಮಹಾರಾಷ್ಟ್ರ' ಎಂದು ಬಣ್ಣ ಬಳಿದು, ಚಾಲಕನ ತಲೆ ಮತ್ತು ಮುಖದ ಮೇಲೆ ಕೇಸರಿ ಪುಡಿಯನ್ನು ಬಳಿದಿದ್ದಾರೆ. ಬಸ್ ಚಾಲಕನನ್ನು 'ಜೈ ಮಹಾರಾಷ್ಟ್ರ' ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ಪುಣೆಯ ಸ್ವಾರಗೇಟ್ ಬಳಿ ಸಹ ನಡು ರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಕನ್ನಡ ಅಕ್ಷರಗಳಿಗೆ ಮಸಿ ಬಳಿದಿದ್ದಾರೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ನಡೆಸಿದ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಕುರಿತು ಮಹಾರಾಷ್ಟ್ರದ ತಮ್ಮ ಸಹೋದ್ಯೋಗಿಯೊಂದಿಗೆ ಮಾತನಾಡಲು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ವಾಸಿಸುವವರು ಕನ್ನಡ ಕಲಿಯಬೇಕು. ಇಂತಹ ಘಟನೆಗಳನ್ನು ಎಲ್ಲ ಪಕ್ಷಗಳು ಖಂಡಿಸಬೇಕು' ಎಂದು ರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು 7 ಹೊಸ ಮಹಾನಗರ ಪಾಲಿಕೆ ರಚಿಸುವ ಮೂಲಕ ರಾಜಧಾನಿಯ ಆಡಳಿತಕ್ಕೆ ಹೊಸ ಆಕಾರ ನೀಡುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯ ಪರಿಶೀಲನಾ ವರದಿಯನ್ನು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಅಧಿಕೃತವಾಗಿ ಸಲ್ಲಿಸಲಾಗಿದೆ. ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯು ಈಗಾಗಲೇ ನಗರ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದಲ್ಲದೆ, ಕಳೆದ ವಾರ, ನಾಗರಿಕರಿಂದ ಸಲಹೆಗಳನ್ನು ಸಹ ಸಂಗ್ರಹಿಸಿದೆ. ಮಾರ್ಚ್ 3 ರಿಂದ ಪ್ರಾರಂಭವಾಗುವ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಪರಿಷ್ಕೃತ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಾಗಿ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಬಿಜೆಪಿ ಮೈಸೂರು ಚಲೋಗೆ ಕರೆ ನೀಡಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಮೈಸೂರು ಪೊಲೀಸರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮೈಸೂರಿನಲ್ಲಿ ಸರ್ಕಾರ ನಿಷೇಧಾಜ್ಞೆ ವಿಧಿಸಿದ್ದರೂ, ನಾವು ಅವರ ಒತ್ತಡಕ್ಕೆ ಮಣಿದು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, “ಮೈಸೂರಿನ ಉದಯಗಿರಿ ಪ್ರದೇಶದಲ್ಲಿ, ದೇಶವಿರೋಧಿಗಳು ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವ ಮೂಲಕ ಭಯೋತ್ಪಾದನೆಯನ್ನು ಬಿಚ್ಚಿಟ್ಟಿದ್ದಾರೆ. ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದ ದಿನವೇ ನಿಷೇಧಾಜ್ಞೆ ವಿಧಿಸಬೇಕಿತ್ತು. ಬದಲಾಗಿ, ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದಾಗ, ಅವರು ನಿಷೇಧಾಜ್ಞೆಯೊಂದಿಗೆ ಬಂಧಿಸುತ್ತಾರೆ" ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ದಾರುಣ ಘಟನೆ ಇಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.ದಂಪತಿಯ ಮೃತದೇಹ ಪತ್ತೆ ಆಗಿದೆ. ಮಗಳ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಮೃತರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾಗಿದ್ದು, ಮಾಸ್ತಪ್ಪ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಕೊಟ್ಟವರು ಇಂದು ಮನೆ ಬಳಿ ಗಲಾಟೆ ಮಾಡಿದ್ದಕ್ಕೆ ನೊಂದು, ಕುಟುಂಬದೊಂದಿಗೆ ಸಾವಿಗೆ ಶರಣಾಗಿದ್ದಾರೆ.
ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಕುಡಿಯುವ ನೀರನ್ನು ಬೇಕಾಬಿಟ್ಟಿಯಾಗಿ ಬಳಸುವುದ ವಿರುದ್ಧ BWSSB ಕ್ರಮ ಕೈಗೊಂಡಿದೆ. ನೀರು ಪೋಲು ಮಾಡುತ್ತಿರುವವರ ವಿರುದ್ಧ ಕಳೆದ ವಾರದಲ್ಲಿ 112 ಪ್ರಕರಣಗಳನ್ನು ದಾಖಲಿಸಿರುವ ಬಿಡಬ್ಲ್ಯುಎಸ್ಎಸ್ ಬಿ 5.60 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಕುಡಿಯುವ ನೀರಿನ ದುರ್ಬಳಕೆಗೆ ಕಡಿವಾಣ ಹಾಕಲು ಹಾಗೂ ಎಲ್ಲ ನಿವಾಸಿಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡುವಂತೆ ಜಲಮಂಡಳಿ ಫೆ.17ರಂದು ಸುತ್ತೋಲೆ ಹೊರಡಿಸಿತ್ತು.