ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಮರಾಠಿ ಪುಂಡರು KSRTC ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ಖಾನಾಪುರ ತಾಲೂಕು ಕರವೇ ನಾರಾಯಣಗೌಡ ಬಣದ ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ MES ಪುಂಡರು ನಿನ್ನೆ ನಡೆಸಿದ ದಾಳಿಯೂ ಕನ್ನಡಿಗರು ರೊಚ್ಚಿಗೇಳುವಂತೆ ಮಾಡಿದೆ. ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲಿನ ಹಲ್ಲೆ ಖಂಡಿಸಿ ಇಂದು ಬೆಳಗಾವಿಯ ರಾಣಿ ಚೆನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ, ಪ್ರವೀಣ ಶೆಟ್ಟಿ ಬಣಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾತನಾಡಿದ ನಾರಾಯಣಗೌಡ, ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕರ್ನಾಟಕದಿಂದ ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿದರು.
KSRTC ಬಸ್ ನಿರ್ವಾಹಕ ಮಹಾದೇವಪ್ಪ ವಿರುದ್ಧ ದಾಖಲಿಸಿದ್ದ ಪೋಕ್ಸೋ ಪ್ರಕರಣವನ್ನು ಸಂತ್ರಸ್ತ ಬಾಲಕಿಯ ತಾಯಿ ವಾಪಸ್ ಪಡೆದಿದ್ದಾರೆ. ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನೀಡಿದ್ದ ಪೋಕ್ಸೋ ದೂರನ್ನು ಹಿಂಪಡೆದಿದ್ದೇವೆ ಎಂದು ಸಂತ್ರಸ್ತ ತಾಯಿ ತಿಳಿಸಿದ್ದಾರೆ. ಈಮಧ್ಯೆ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಪ್ರತಿಕ್ರಿಯಿಸಿ, ಆ ವಿಡಿಯೋ ಪರಿಶೀಲಿಸಿ, ತಕ್ಷಣ ತನಿಖಾಧಿಕಾರಿಯನ್ನು ಬದಲಿಸಿ, ಪ್ರಕರಣವನ್ನು ಎಸಿಪಿಗೆ ವಹಿಸಿದ್ದೇವೆ. ಅದೇ ರೀತಿ ಈ ವಿಡಿಯೋ ಸಂಗ್ರಹಿಸಿ, ಮತ್ತೊಂದು ಹೇಳಿಕೆ ದಾಖಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿದ್ದೇನೆ. ಹಾಗೆಯೇ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಬಸ್ ನಿರ್ವಾಹಕ ಮಹಾದೇವಪ್ಪ ಮೇಲಿನ ಹಲ್ಲೆ ಕುರಿತಂತೆ ವರದಿ ನೀಡುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಐಜಿಪಿ ಮತ್ತು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸದ್ಯ ಬಸ್ ಸಂಚಾರ ಸ್ಥಗಿತಗೊಂಡಿದೆ. ವಾತಾವರಣ ತಿಳಿಯಾದ ಮೇಲೆ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಪುನಾರಾಂಭಗೊಳ್ಳುತ್ತದೆ ಎಂದು ಪರಮೇಶ್ವರ್ ತಿಳಿಸಿದರು.
ಮಂಗಳೂರಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆಯ ಇಬ್ಬರು ಮಾಸ್ಟರ್ ಮೈಂಡ್ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್ ಹಾಗೂ ಭಾಸ್ಕರ್ ಬೆಳ್ಚಪಾಡ ಅಲಿಯಾಸ್ ಶಶಿ ಥೇವರ್ ಬಂಧಿತ ಆರೋಪಿಗಳು. ಸ್ಥಳೀಯ ನಿವಾಸಿ ಮಹಮ್ಮದ್ ನಜೀರ್ ಜೊತೆ ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ರೂಪಿಸಿ ದರೋಡೆ ನಡೆಸಲು ಇಬ್ಬರು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು. ಆರೋಪಿಗಳು ದೋಚಿದ್ದ 18 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾಶಿವರಾತ್ರಿಯ ದಿನದಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪ್ರಸಿದ್ಧ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆಗೆ ಹೈಕೋರ್ಟ್ ವಿಭಾಗೀಯ ಪೀಠ ಇಂದು ಅನುಮತಿ ನೀಡಿದೆ. ನಾಳೆ ಮಹಾ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಹಿಂದೂ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ನಾಳೆ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತು ಪಡಿಸಿ 15 ಜನರಿಗೆ ಪೂಜೆಗೆ ಅವಕಾಶ ನೀಡಿದೆ. ದರ್ಗಾದೊಳಗೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅನುಮತಿ ನಿರಾಕರಿಸಿದ್ದರು.
17 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದ ಆರೋಪಿ ಅರುಣ್ ತೊನೆಪ ಮತ್ತು ಸಂತ್ರಸ್ತೆಯ ಗೆಳೆಯ ವಿಕ್ಕಿಯನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತಾಯಿ ಜೊತೆ ದೂರು ನೀಡಲು ಬಂದಿದ್ದ ಸಂತ್ರಸ್ತ ಅಪ್ರಾಪ್ತ ಬಾಲಕಿಗೆ ಸಹಾಯ ಮಾಡುವ ನೆಪದಲ್ಲಿ ಕಾನ್‌ಸ್ಟೆಬಲ್ ಅರುಣ್, ಬಾಲಕಿಯ ವಿಶ್ವಾಸ ಗಳಿಸಿಕೊಂಡಿದ್ದಾನೆ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದಾರೆ.