ಬೀದರ್: ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ಆನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದು, ಎಚ್ಚೆತ್ತುಕೊಂಡ ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಸೋಮವಾರ ಯುವಕನೊಬ್ಬ ಆನೆ ದಾಳಿಯಿಂದ ಸಾವನ್ನಪ್ಪಿದರೆ, ಕೋಲಾರ ಜಿಲ್ಲೆಯ ಕಾಮಸಮುದ್ರದಲ್ಲಿ ಮಂಗಳವಾರ ಮಹಿಳೆಯೊಬ್ಬರು ಜಂಬೋ ದಾಳಿಗೆ ಬಲಿಯಾಗಿದ್ದಾರೆ ಎಂದು ಸಚಿವರ ಕಚೇರಿ ತಿಳಿಸಿದೆ.
ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಖಂಡ್ರೆ, ರಾಜ್ಯ ಸರ್ಕಾರ ಮೃತರ ಕುಟುಂಬಗಳೊಂದಿಗೆ ಇದೆ ಎಂದು ಹೇಳಿದ್ದಾರೆ.
"ಮೃತರ ಸಂಬಂಧಿಕರಿಗೆ ತಕ್ಷಣ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಈ ಘಟನೆಗಳು ಬೆಳಗ್ಗೆ ಮತ್ತು ಸಂಜೆ ನಡೆಯುತ್ತಿವೆ". ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಆನೆಗಳ ಚಲನವಲನದ ಕುರಿತು ಅರಣ್ಯ ಇಲಾಖೆ ನೀಡಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಮತ್ತು ಜಾಗರೂಕರಾಗಿರಬೇಕು ಎಂದು ಕೇಳಿಕೊಂಡಿದ್ದಾರೆ.
ಆನೆ-ಮಾನವ, ವನ್ಯಜೀವಿ-ಮಾನವ ಸಂಘರ್ಷ ಹೊಸ ಸಮಸ್ಯೆಯೇನಲ್ಲ ಮತ್ತು ಅದು ಹಲವು ವರ್ಷಗಳಿಂದಲೂ ಇದೆ. ವನ್ಯಜೀವಿ-ಮಾನವ ಸಂಘರ್ಷವನ್ನು ನಿಯಂತ್ರಿಸಲು ಸರ್ಕಾರ ಆನೆ ಕಂದಕಗಳನ್ನು ನಿರ್ಮಿಸುತ್ತಿದೆ, ಜೊತೆಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಸಹ ಹಾಕುತ್ತಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ.
2024-25 ರಲ್ಲಿ, 78.917 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕೆಲಸ ಪೂರ್ಣಗೊಂಡಿದೆ. ಅಲ್ಲದೆ 41.87 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 103 ಕಿ.ಮೀ. ಬ್ಯಾರಿಕೇಡ್ ಹಾಕುವ ಗುರಿಯನ್ನು ನಿಗದಿಪಡಿಸಲಾಗಿದೆ ಮತ್ತು ಮಾರ್ಚ್ 31 ರೊಳಗೆ ಕೆಲಸದ ಪ್ರಕ್ರಿಯೆಯು ಪ್ರಾರಂಭವಾಗಲಿದೆ" ಎಂದು ಅವರು ತಿಳಿಸಿದ್ದಾರೆ.