ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ಮಾರ್ಚ್ 9ರಂದು ನಮ್ಮ ಪೊಲೀಸ್, ನಮ್ಮ ಹೆಮ್ಮೆ' ಬ್ಯಾನರ್ ಅಡಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಓಟದ ಎರಡನೇ ಆವೃತ್ತಿಯನ್ನು ಆಯೋಜಿಸಲು ಸಜ್ಜಾಗಿದೆ.
ಈ ಓಟದಲ್ಲಿ ಎಲ್ಲಾ ವಯೋಮಾನದ 10,000 ಕ್ಕೂ ಹೆಚ್ಚು ಮಂದಿ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ, ವೃತ್ತಿಪರ ಓಟಗಾರರಿಗೆ 10 ಕಿ.ಮೀ ಓಟ ಮತ್ತು ಎಲ್ಲರಿಗೂ ಮುಕ್ತ 5 ಕಿ ಮೀ ಓಟ ಆಯೋಜಿಸಲಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಓಟ ನಡೆಯಲಿದೆ. ಬೆಂಗಳೂರಿನಲ್ಲಿ, ಎರಡೂ ಓಟಗಳು ವಿಧಾನಸೌಧದಲ್ಲಿ ಪ್ರಾರಂಭವಾಗುತ್ತದೆ ಮತ್ತು ಕಬ್ಬನ್ ಪಾರ್ಕ್ ಮೂಲಕ ಹಾದುಹೋಗುತ್ತದೆ. ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಓಟದ ಸ್ಪರ್ಧಿಗಳಿಗೆ ನೀಡುವ ಟೀ ಶರ್ಟ್, ಕಿರುಹೊತ್ತಿಗೆ ಹಾಗೂ ವಿಜೇತರಿಗೆ ನೀಡುವ ಪದಕಗಳನ್ನು ಅನಾವರಣಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್, ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ರಾಜ್ಯದ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಗೌರವ ಸೂಚಿಸಲು ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದರು.
ಆಸಕ್ತರು ನೋಂದಣಿ ಮಾಡಿಕೊಳ್ಳಲು ಮಾರ್ಚ್ 4ರವರೆಗೆ ಅವಕಾಶವಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದರು.