ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅದರಲ್ಲಿ ಅವರು ಬೆಂಗಳೂರು ಬಿಟ್ಟು ಹೊರಹೋಗಬೇಕಾದರೆ ಕೋರ್ಟ್ ಅನುಮತಿ ಪಡೆಯಬೇಕಿತ್ತು. ಈಗ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ.
ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು.
ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು. ಆದರೂ, ಹೈಕೋರ್ಟ್ ದರ್ಶನ್ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ದೇಶಾದ್ಯಂತ ಸಂಚಾರ ಮಾಡಬಹುದು, ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೇಳುವ ಮೂಲಕ ಬಿಗ್ ರಿಲೀಫ್ ನೀಡಿದೆ.
ಜಾಮೀನು ಷರತ್ತುಗಳ ಪ್ರಕಾರ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರ 15 ಆರೋಪಿಗಳು ಫೆಬ್ರವರಿ 25 ರಂದು ಬೆಂಗಳೂರು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ಇತರ ಆರೋಪಿಗಳು ಪೊಲೀಸರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿಕೊಂಡರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 131 ದಿನಗಳನ್ನು ಕಸ್ಟಡಿಯಲ್ಲಿ ಕಳೆದ ನಂತರ, ಅಕ್ಟೋಬರ್ 30, 2024 ರಂದು ದರ್ಶನ್ ಜೈಲಿನಿಂದ ಬಿಡುಗಡೆಯಾದರು.
ದರ್ಶನ್ ಮತ್ತು ಇತರರಿಗೆ ನೀಡಲಾದ ಜಾಮೀನನ್ನು ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಜನವರಿ 24 ರಂದು ಸುಪ್ರೀಂ ಕೋರ್ಟ್ ದರ್ಶನ್, ಪವಿತ್ರಾ ಮತ್ತು ಇತರ ಐದು ಜನರಿಗೆ ನೋಟಿಸ್ ಜಾರಿ ಮಾಡಿತ್ತು. ಜಾಮೀನು ನೀಡುವಾಗ, ನ್ಯಾಯಾಲಯವು ಅವರು ಮತ್ತು ಪ್ರಕರಣದ ಇತರ ಆರೋಪಿಗಳು ಪ್ರತಿ ತಿಂಗಳು ತನ್ನ ಮುಂದೆ ಹಾಜರಾಗುವಂತೆ ಕೇಳಿಕೊಂಡಿತು.
ದರ್ಶನ್ ಅವರು ಇಂದಿನಿಂದ ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ, ಈ ಸುದ್ದಿಯಲ್ಲಿ ಸತ್ಯವಿಲ್ಲ. ದರ್ಶನ್ ಅವರಿಗೆ ಬೆನ್ನು ನೋವು ಬಹುವಾಗಿ ಕಾಡುತ್ತಿದೆ. ಹೀಗಾಗಿ, ಇದಕ್ಕೆ ಅವರು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ನೋವು ಪೂರ್ಣ ಗುಣಮುಖವಾದ ಬಳಿಕವಷ್ಟೆ ಅವರು ಚಿತ್ರೀಕರಣಕ್ಕೆ ಹೋಗಲಿದ್ದಾರೆ ಎಂದು ಅವರ ಆಪ್ತ ಬಳಗದವರು ಹೇಳಿದ್ದಾರೆ.