ಬೆಂಗಳೂರು: ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 16.84 ಕೋಟಿ ರೂಪಾಯಿ ನಷ್ಟವಾಗಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ.
2024ರ ಡಿಸೆಂಬರ್ 26 ರಂದು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಐಪಿಸಿಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ.
ಅಧಿಕೃತ ಹೇಳಿಕೆಯ ಪ್ರಕಾರ, 2014 ಮತ್ತು 2018 ರ ನಡುವೆ ನಿಜವಾದ ಫಲಾನುಭವಿಗಳಾದ ಕೃಷಿ ಕುಟುಂಬಗಳ ಬಡ ಭೂರಹಿತ ಮಹಿಳೆಯರ ಹೆಸರಿನಲ್ಲಿ ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಡಿ.30ರಿಂದ ಐದು ದಿನಗಳ ಕಾಲ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಆಗಿನ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಎಸ್.ಎಸ್.ಮಾನಗಿರಿ ಸೇರಿದಂತೆ ಎಂಟು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರ ನಿರ್ದೇಶನದ ಮೇರೆಗೆ ನಡೆಸಲಾದ ತನಿಖೆಯಲ್ಲಿ ಆರೋಪಿತ ಅಧಿಕಾರಿಗಳು ಜಮೀನು ಮಂಜೂರಾತಿ ನಿಯಮ ಉಲ್ಲಂಘಿಸಿ, ನಿಗಮದಿಂದ ನಿವೇಶನ ಪಡೆದಿದ್ದರೂ ಆಯಾ ಸಮುದಾಯದ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಆರೋಪಿ ಅಧಿಕಾರಿಗಳು ಅನರ್ಹರಿಗೆ ಭೂಮಿಯನ್ನು ಹಂಚಿಕೆ ಮಾಡಿದ್ದಾರೆ ಮತ್ತು ಒಂದೇ ಕುಟುಂಬಕ್ಕೆ ಸೇರಿದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ.
2012 ರಿಂದ 2018 ರವರೆಗಿನ ನಿಗಮದ 23 ಕಡತಗಳು ನಾಪತ್ತೆಯಾಗಿದ್ದು, 33 ಕಡತಗಳಲ್ಲಿ ನಕಲಿ ಮಾರಾಟ ಪತ್ರಗಳು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ರಸೀದಿಗಳು ಪತ್ತೆಯಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 16.84 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಕಚೇರಿ ಪ್ರಕಟಣೆ ತಿಳಿಸಿದೆ.