ಬೆಂಗಳೂರು: ನಗರದಲ್ಲಿನ 402 ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ.
ಈ ಪೈಕಿ 117 ಕಟ್ಟಡಗಳು ಕೆಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು 285 ಕಟ್ಟಡಗಳು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿವೆ. ಬಿಲ್ಡಿಂಗ್ ಬೈಲಾಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.
ನಿಯಮ ಉಲ್ಲಂಘಿಸುತ್ತಿರುವ ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ನಿರ್ಮಾಣ ಕಾರ್ಯಗಳನ್ನು ಮುಂದುವರೆಸುತ್ತಿದ್ದಾರೆ. ಹೀಗಾಗಿ ಕಟ್ಟಡಗಳ ಸೀಲ್ ಮಾಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಅರೆ ನ್ಯಾಯಾಂಗ ಸಂಸ್ಥೆಯಾಗಿರುವುದರಿಂದ ಕೆಲವರು ವಿಚಾರಣೆಗಾಗಿ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ವಜಾಗೊಳಿಸಿದ ನಂತರ, ಪಾಲಿಕೆಯ ಇಂಜಿನಿಯರ್‌ಗಳು ತಕ್ಷಣವೇ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸುತ್ತಿದ್ದಾರೆ. ಮಹದೇವಪುರ ವಲಯದಲ್ಲಿ ಇದುವರೆಗೆ ನಿರ್ಮಾಣ ಹಂತದಲ್ಲಿದ್ದ 11 ಕಟ್ಟಡಗಳಿಗೆ ಸೀಲ್ ಮಾಡಲಾಗಿದ್ದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸುತ್ತೋಲೆ ಆಧರಿಸಿ, ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ವಲಯ ಆಯುಕ್ತ ರಮೇಶ್ ಅವರು ತಿಳಿಸಿದ್ದಾರೆ.
13 ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದರು.
ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ಆಯುಕ್ತರು ಹಲವಾರು ಅರ್ಜಿಗಳನ್ನು ವಜಾಗೊಳಿಸಿದ್ದು, ಸೆಕ್ಷನ್ 356, ಬಿಬಿಎಂಪಿ ಕಾಯಿದೆ, 2020 ರ ಪ್ರಕಾರ ಕ್ರಮ ಕೈಗೊಳ್ಳಲು ಆದೇಶಗಳನ್ನು ನೀಡಿದ್ದಾರೆ. ಹೀಗಾಗಿ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆ. ಅನಧಿಕೃತ ನಿರ್ಮಾಣಗಳನ್ನು ತೆಗೆದುಹಾಕಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಗಡುವು ಮುಗಿದ ನಂತರ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು ಮಹದೇವಪುರ ವಲಯದ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.
ಮುಖ್ಯ ಆಯುಕ್ತರು ಇದುವರೆಗೆ 19 ಮೇಲ್ಮನವಿಗಳನ್ನು ವಜಾಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡು ಡಜನ್‌ಗೂ ಹೆಚ್ಚು ಮೇಲ್ಮನವಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಪೂರ್ವ ವಲಯದ ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎರಡು ಕಟ್ಟಡಗಳನ್ನು ಬೈಲಾ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೀಲ್ ಮಾಡಿದೆ ಎಂದು ಮೂಲಗಳು ತಿಳಿಸಿವೆ