ಗೃಹ ಸಚಿವ ಜಿ ಪರಮೇಶ್ವರ 
ರಾಜ್ಯ

ಸಿಎಂ ಕಚೇರಿಯಲ್ಲಿ ಮಾವೋವಾದಿಗಳು ಶರಣಾಗುವುದರಲ್ಲಿ ತಪ್ಪೇನಿಲ್ಲ: ಗೃಹ ಸಚಿವ ಜಿ ಪರಮೇಶ್ವರ

ನಕ್ಸಲರು ಶರಣಾಗುವಾಗ ನಿರಾಯುಧರಾಗಿದ್ದರು. ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ಅವುಗಳನ್ನು ಎಲ್ಲಿಟ್ಟಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮಾಡುತ್ತಾರೆ.

ಬೆಂಗಳೂರು: ಕರ್ನಾಟಕದಲ್ಲಿ ನಕ್ಸಲಿಸಂ 'ಹೆಚ್ಚು ಕಡಿಮೆ' ಅಂತ್ಯಗೊಂಡಿದೆ. ಮುಖ್ಯಮಂತ್ರಿ ಕಚೇರಿಯಲ್ಲಿ ಮಾವೋವಾದಿಗಳು ಶರಣಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ಹೇಳಿದ್ದಾರೆ.

ರಾಜ್ಯದಲ್ಲಿ ಆರು ಮಂದಿ ನಕ್ಸಲರಿಗೆ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡಿದೆ. ಬಂದೂಕಿನ ಮೊರೆತ ಕೇಳಿಸಿದ ನಕ್ಸಲರನ್ನು ಕ್ಷಮಿಸಿ ಅವರನ್ನು ನಗರ ನಕ್ಸಲರನ್ನಾಗಿಸುತ್ತಿದೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ ಸುನೀಲ್‌ ಕುಮಾರ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಯಾರೊಬ್ಬರೂ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕು. ನಕ್ಸಲರು ಮುಖ್ಯಮಂತ್ರಿಗಳ ಮುಂದೆ ಶರಣಾದಾಗ ಅದು ರಾಜ್ಯದ ಎಲ್ಲರಿಗೂ ಗೊತ್ತಾಗುತ್ತದೆ. ನಕ್ಸಲರ ಪರಿವರ್ತನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.

ಮಾವೋವಾದಿಗಳ ಚಟುವಟಿಕೆ ಹೆಚ್ಚಿರುವ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸುನೀಲ್ ಕುಮಾರ್, 'ಕಾಡುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಾವೋವಾದಿಗಳನ್ನು ನಗರ ನಕ್ಸಲರನ್ನಾಗಿಸುವ ಪ್ರಯತ್ನ ಇದಾಗಿದೆ. ಹಲವು ವರ್ಷಗಳಿಂದ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ನಕ್ಸಲರ ವಿರುದ್ಧ ಹಗಲಿರುಳು ಕಾರ್ಯಾಚರಣೆ ನಡೆಸಿದ್ದು, ಈ ಬೆಳವಣಿಗೆ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪರಮೇಶ್ವರ, ‘ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಅವರ ಕ್ಷೇತ್ರದಲ್ಲಿಯೇ ಗಮನಾರ್ಹ ನಕ್ಸಲ್‌ ಚಟುವಟಿಕೆ ಇದೆ. ಹಾಗಿದ್ದರೆ, ಕಾರ್ಕಳದಲ್ಲಿ ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

'ನಕ್ಸಲರು ಸಿಎಂ ಮುಂದೆ ಶರಣಾಗುವುದು ಸೂಕ್ತವಲ್ಲ ಎಂದು ಯಾರು ಹೇಳುತ್ತಿದ್ದಾರೆಯೋ ಅವರು ಏನು ತಪ್ಪು ಮತ್ತು ಅದು ಏಕೆ ತಪ್ಪೆಂದು ಭಾವಿಸುತ್ತಿದ್ದಾರೆ ಎಂಬುದನ್ನು ವಿವರಿಸಬೇಕು. ನಕ್ಸಲ್ ಚಟುವಟಿಕೆಗೆ ನಮ್ಮಲ್ಲಿ ಅವಕಾಶವಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ಬಯಸಿದ್ದೇವೆ. ಮುಖ್ಯಮಂತ್ರಿ ಮುಂದೆ ನಕ್ಸಲರು ಶರಣಾದಾಗ, ಇಡೀ ರಾಜ್ಯ ಜಾಗೃತಗೊಳ್ಳುತ್ತದೆ ಮತ್ತು ನಕ್ಸಲಿಸಂನಲ್ಲಿ ನಂಬಿಕೆ ಇರುವವರು ಮರುಚಿಂತನೆ ಮಾಡಿಕೊಳ್ಳಬಹುದು' ಎಂದು ಬಿಜೆಪಿ ಟೀಕೆಗೆ ಪರಮೇಶ್ವರ ಪ್ರತಿಕ್ರಿಯಿಸಿದರು.

ನಕ್ಸಲರಲ್ಲಿ ಸುಧಾರಣೆ ತರಲು ಸರ್ಕಾರ ಮತ್ತು ಸಿಎಂ ಬದ್ಧರಾಗಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂಬುದನ್ನು ಟೀಕಾಕಾರರು ವಿವರಿಸಲಿ. ಸಿಎಂ ಮುಂದೆ ಶರಣಾಗತಿ ಆಗಬಾರದಿತ್ತು ಎಂದು ಸರಳವಾಗಿ ಹೇಳುವುದು ಸರಿಯಲ್ಲ. ಅವರು ತಮ್ಮ ಆಕ್ಷೇಪಣೆಗಳಿಗೆ ಸೂಕ್ತ ಕಾರಣಗಳನ್ನು ಒದಗಿಸಬೇಕು. ಮುಖ್ಯವಾಹಿನಿಗೆ ಮರಳಲು ಬಯಸುವ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ನಾವು ಪ್ಯಾಕೇಜ್ ಅನ್ನು ವಿಸ್ತರಿಸುತ್ತೇವೆ. ಅದರಲ್ಲಿ ತಪ್ಪೇನು?. ಅವರು ಇಂತಹ ಮಾತುಗಳನ್ನು ಹೇಳುತ್ತಾರೆ. ಆದರೆ, ಅವರ ಕ್ಷೇತ್ರದಲ್ಲಿಯೇ ನಕ್ಸಲ್ ಚಟುವಟಿಕೆಗಳು ಹೆಚ್ಚುತ್ತಿವೆ ಎಂದರು.

ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಕ್ಸಲರು ಶರಣಾಗುವಾಗ ಅವರು ನಿರಾಯುಧರಾಗಿದ್ದರು. ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ಅವರು ಅವುಗಳನ್ನು ಎಲ್ಲಿಟ್ಟಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮಾಡುತ್ತಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ನಕ್ಸಲಿಸಂ ಅಧಿಕೃತವಾಗಿ ಅಂತ್ಯಗೊಂಡಿದೆಯೇ ಎಂಬ ಬಗ್ಗೆ ಸಚಿವರು, 'ಹೌದು, ಹೆಚ್ಚು ಕಡಿಮೆ ಶೇ 99 ರಷ್ಟು ಕೊನೆಗೊಂಡಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಶರಣಾದ ನಕ್ಸಲರಲ್ಲಿ ಕೆಲವರು ತಮಿಳುನಾಡು ಮತ್ತು ಕೇರಳದವರು ಇದ್ದಾರೆ. ಹೀಗಾಗಿ, ನಮ್ಮ ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಶರಣಾದ ನಕ್ಸಲರ ವಿರುದ್ಧ ಬೇರೆ ರಾಜ್ಯಗಳಲ್ಲಿ ಪ್ರಕರಣಗಳಿದ್ದು, ಆ ರಾಜ್ಯ ಸರ್ಕಾರಗಳೂ ನಿರ್ಧಾರ ಕೈಗೊಳ್ಳಬೇಕು ಎಂದು ಪರಮೇಶ್ವರ ಹೇಳಿದರು.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದ ಆರು ನಕ್ಸಲರ ಗುಂಪಿನಲ್ಲಿ ಕರ್ನಾಟಕದ ನಾಲ್ವರು ಶೃಂಗೇರಿಯ ಮುಂಡಗಾರು ಲತಾ, ಕಳಸದ ವನಜಾಕ್ಷಿ ಬಾಳೆಹೊಳೆ, ದಕ್ಷಿಣ ಕನ್ನಡದ ಸುಂದರಿ ಕುತ್ಲೂರು ಮತ್ತು ರಾಯಚೂರಿನ ಮರೆಪ್ಪ ಅರೋಲಿ ಸೇರಿದ್ದಾರೆ. ಉಳಿದ ಇಬ್ಬರು ತಮಿಳುನಾಡಿನ ವೆಲ್ಲೂರಿನ ವಸಂತ ಕೆ ಮತ್ತು ಕೇರಳದ ವಯನಾಡಿನ ಎನ್ ಜೀಶಾ ಆಗಿದ್ದಾರೆ.

ದೆಹಲಿಯಲ್ಲಿ ನೂತನ ಎಐಸಿಸಿ ಕಚೇರಿ ಕುರಿತು ಮಾತನಾಡಿದ ಅವರು, ‘ಎಐಸಿಸಿ ಕಚೇರಿಗೆ 2009ರಲ್ಲಿ ಶಂಕುಸ್ಥಾಪನೆ ನಡೆದಿದ್ದು, ಹಲವು ವರ್ಷಗಳ ಕಾಲ ವಿಳಂಬವಾಗಿತ್ತು. ಇದೀಗ ಉದ್ಘಾಟನೆಗೆ ಸಿದ್ಧವಾಗಿದ್ದು, ಜನವರಿ 15ರಂದು ಸಮಾರಂಭ ನಡೆಯಲಿದೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT