ಬೆಂಗಳೂರು: ವಿಕ್ರಂಗೌಡ ಎನ್‌ಕೌಂಟರ್ ಆದ ಕೆಲವೇ ದಿನಗಳಲ್ಲಿ ಸಿಎಂ ಸಮ್ಮುಖದಲ್ಲಿ ನಕ್ಸಲರು ಶರಣಾಗಿದ್ದು, ಇದರ ಹಿಂದೆ ಬೇರೇನೋ ಇದೆ ಎಂದು ಬಿಜೆಪಿ ಸಂಶಯ ವ್ಯಕ್ತಪಡಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಕ್ಸಲರು ಶರಣಾಗತಿಯಾಗಿರುವುದು ಕಣ್ಣಿಗೆ ಕಾಣುತ್ತಿದೆ. ಆದರ, ಇದರ ಹಿಂದೆ ಬೇರೇನೋ ಇದೆ. ಶರಣಾಗತಿ ಪ್ರಕ್ರಿಯೆ ಅರ್ಥ ಮಾಡಿಕೊಳ್ಳಲು, ಸಂಪರ್ಕ ಸಾಧಿಸಲು, ಮಧ್ಯಸ್ಥಿಕೆ ವಹಿಸಲು, ಮನವೊಲಿಸಲು ಹಾಗೂ ಶರಣಾಗತಿಗೆ ವ್ಯವಸ್ಥೆ ಮಾಡಲು ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ. ಎಡಗುಂಪುಗಳ ನಡುವಿನ ಆಂತರಿಕ ಕ್ರೌರ್ಯ ಒಂದು ಎನ್‌ಕೌಂಟರ್ ಹಾಗೂ ಹಲವರನ್ನು ಶರಣಾಗುವಂತೆ ಮಾಡಿತೇ ಎಂಬ ಅನುಮಾನಗಳು ಮೂಡುತ್ತಿವೆ. ಇದಕ್ಕೆ ಸರಕಾರದ ಉನ್ನತ ಹುದ್ದೆಯಲ್ಲಿ ಇರುವವರು ಮಾತ್ರ ಉತ್ತರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಸಮಗ್ರತೆಯ ಪ್ರಕ್ರಿಯೆಯು ಪ್ರಶ್ನಾರ್ಹ ಎನ್ನುವುದು ನಿಜವೇ ಆಗಿದ್ದರೆ ಸರಕಾರ ಉತ್ತರಿಸಬೇಕಾದದ್ದು ಸಾಕಷ್ಟಿದೆ. ಸಿದ್ದರಾಮಯ್ಯ ಸರಕಾರದ ಮೇಲೆ ಅರಾಜಕತಾವಾದಿಗಳ ದೊಡ್ಡ ಪ್ರಭಾವವೇ ಆಗಿದೆ ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ವಿಕ್ರಂಗೌಡ ಎನ್‌ಕೌಂಟರ್ ಆದ ಕೆಲವೇ ದಿನಗಳಲ್ಲಿ ಸಿಎಂ ಸಮ್ಮುಖದಲ್ಲಿ ನಕ್ಸಲರು ಶರಣಾಗಿರುವುದರ ಹಿಂದೆ ಬೇರೇನೋ ಇದೆ ಎನ್ನಿಸುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.