ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ಲಕ್ಕುಂಡಿ ಸ್ತಬ್ಧಚಿತ್ರ 
ರಾಜ್ಯ

ಗಣರಾಜ್ಯೋತ್ಸವ ಪರೇಡ್ 2025: ಪಥಸಂಚಲನಕ್ಕೆ 'ಲಕ್ಕುಂಡಿ' ಸ್ತಬ್ಧಚಿತ್ರ ಸಿದ್ಧ

ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿ ವರ್ಷ ತನ್ನ ವಿಶಿಷ್ಟ ಸ್ತಬ್ಧಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ.

ಹುಬ್ಬಳ್ಳಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು 'ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು' ಸಂಪೂರ್ಣವಾಗಿ ಸಿದ್ಧಗೊಂಡಿದೆ. ಈ ಶಿಲ್ಪಕಲೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ (ರಾಜ್‌ಪಥ್‌) ಇದೇ 26ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌ ಅವರು, ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿ ವರ್ಷ ತನ್ನ ವಿಶಿಷ್ಟ ಸ್ತಬ್ಧಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ಹೇಳಿದರು.

ಲಕ್ಕುಂಡಿಯು ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ಲಕ್ಕುಂಡಿಯ ಶಿಲ್ಪಕಲೆಯ ವೈಭವವನ್ನು ಅದರ ಪ್ರತಿರೂಪದಂತೆ ‘ಕೆತ್ತುವ’ ಬೃಹತ್‌ ಸವಾಲು ಎದುರಾಗಿತ್ತು. ಆರಂಭದಲ್ಲಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜು, ಹೊಂಜು ಮತ್ತು ಮಳೆ ಎಲ್ಲವೂ ಸವಾಲುಗಳು ಕಂಡಿದ್ದವು. ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿಬಂದಿದೆ.

2025ರ ಜನವರಿ 26ರಂದು ನಡೆಯುವ ದಹೆಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು, ಮೆಕ್ಕೆಕಟ್ಟು: ಮರಕೆತ್ತನೆಯ ದೈವ ನಿಧಿ, ಕರ್ನಾಟಕದ ಸಮೃದ್ದಿಯ ಆಚರಣೆಗಳು ಮತ್ತು ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ʼಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ.

ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ 18 ಕಲಾವಿದರ ತಂಡವನ್ನು ಜಗ್ಗಲಿಗೆ ಕಲಾವಿದ ಲಿಂಗಯ್ಯ ಮುನ್ನಡೆಸುತ್ತಾರೆ. ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ತಲಾ ನಾಲ್ವರು ಮಹಿಳೆಯರು ಮತ್ತು ಪುರುಷರು ಜಗ್ಗಲಿಗೆ ಬಾರಿಸುತ್ತಾ ಮುನ್ನಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ತಬ್ಧ ಚಿತ್ರದ ವಿಶೇಷತೆ ಏನು...?

ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ 'ಶಿಲ್ಪಕಲೆಯ ತೊಟ್ಟಿಲು' ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.

ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.

ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT