ಬೆಂಗಳೂರು: ನಮ್ಮ ಬೆಂಗಳೂರು ಮೆಟ್ರೋ ಪ್ರಯಾಣ ದರವನ್ನು ಶೇಕಡಾ 45 ರಷ್ಟು ಏರಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಬಿಜೆಪಿ ನಾಯಕ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಬುಧವಾರ ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್‌ಸಿಎಲ್)ನ ಪ್ರಸ್ತಾವಿತ ದರ ಏರಿಕೆ ಫೆಬ್ರವರಿ 1 ರಿಂದ ಜಾರಿಗೆ ಬರಬೇಕಿತ್ತು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೋದಿ ಸರ್ಕಾರ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದೆ ಎಂದು ಸಂಸದರು ತಿಳಿಸಿದ್ದಾರೆ.
ಬೆಂಗಳೂರಿನ ಜನರಿಗೆ ಇದು ದೊಡ್ಡ ಗೆಲುವು - ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಯುತ ಮೆಟ್ರೋ ದರ ನಿಗದಿಯನ್ನು ಖಚಿತಪಡಿಸಿಕೊಳ್ಳಲಾಗುವುದು" ಎಂದು ಮೋಹನ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನಲಾದ ನಿರ್ಧಾರದ ಅಧಿಕೃತ ಪ್ರತಿಯನ್ನು ಇನ್ನೂ ಪಡೆಯಬೇಕಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.
ನ್ಯಾಯಮೂರ್ತಿ ನಿವೃತ್ತ) ಆರ್. ಥರಾನಿ ನೇತೃತ್ವದ ಬಿಎಂಆರ್‌ಸಿಎಲ್‌ನ ಮೂವರು ಸದಸ್ಯರ ದರ ನಿಗದಿ ಸಮಿತಿಯು ಪ್ರಯಾಣ ದರವನ್ನು ಶೇಕಡಾ 40-45 ರಷ್ಟು ಹೆಚ್ಚಿಸಲು ಶಿಫಾರಸು ಮಾಡಿದೆ.
ಬಿಎಂಆರ್‌ಸಿಎಲ್‌ನ 14 ವರ್ಷಗಳ ಇತಿಹಾಸದಲ್ಲಿ ಜೂನ್ 2017 ರಲ್ಲಿ ಕೊನೆಯ ಬಾರಿಗೆ ಮೆಟ್ರೋ ದರ ಏರಿಕೆ ಮಾಡಲಾಗಿತ್ತು.