ಕೊಪ್ಪಳ: ಮೇ 5 ರಂದು ನಾಪತ್ತೆಯಾಗಿದ್ದ ಕೊಪ್ಪಳ ಜಿಲ್ಲೆಯ ಹೊಸಳ್ಳಿ ಗ್ರಾಮದ 11 ವರ್ಷದ ಬಾಲಕಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ಮೂಲಕ 24 ದಿನಗಳ ನಂತರ ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿಸಿದ್ದಾಳೆ.
ಮಾನಸಿಕ ಅಸ್ವಸ್ಥಳಾಗಿರುವ ಬಾಲಕಿ ತನ್ನ ಅಜ್ಜಿಯೊಂದಿಗೆ ಹೊಸಳ್ಳಿ ಬಸ್ ನಿಲ್ದಾಣದಲ್ಲಿ ಬಸ್'ಗಾಗಿ ಕಾದು ಕುಳಿತಿದ್ದರು. ಈ ವೇಳೆ ಅಜ್ಜಿ ನಿದ್ರೆಗೆ ಜಾರಿದ್ದು, ಬಾಲಕಿ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ. ಚಾಲಕ ಮತ್ತು ಕಂಡಕ್ಟರ್ ಯಾರೊಂದಿಗಾದರೂ ಪ್ರಯಾಣಿಸುತ್ತಿದ್ದಾಳೆ ಎಂದು ಭಾವಿಸಿ, ಸುಮ್ಮನಾಗಿದ್ದಾರೆ.
ಬಸ್ ಹೊರಟು, ಮೈಸೂರು ತಲುಪಿದಾಗ ಬಾಲಕಿ ಜೊತೆಗೆ ಯಾರೂ ಇರದಿರುವುದನ್ನು ಕಂಡ ಮೈಸೂರು ರಸ್ತೆ ಸಾರಿಗೆ ಕಚೇರಿಯ ಅಧಿಕಾರಿಗಳು, ಬಾಲಕಿಯನ್ನು ಮಕ್ಕಳ ಆರೈಕೆ ಕೇಂದ್ರವಾದ ಮೈಸೂರು ಬಾಲ ಮಂದಿರಕ್ಕೆ ಹಸ್ತಾಂತರಿಸಿದ್ದಾರೆ. ಈ ನಡುವೆ ಮಗುವಿನ ತಂದೆ ಕೊಪ್ಪಳ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಾರೆ.
ಇದಾದ ಕೆಲ ದಿನಗಳ ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಡೆಸಿದ ನಿಯಮಿತ ಮಾಸಿಕ ಸಭೆಯಲ್ಲಿ, ಸ್ನೇಹ ಇಲಾಖೆ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಚರ್ಚೆ ನಡೆಸಿದ್ದು, ನಾಪತ್ತೆ ಕುರಿತ ವಿವರಗಳನ್ನು ಜಿಲ್ಲೆಯಾದ್ಯಂತ ಮಕ್ಕಳ ರಕ್ಷಣಾ ಅಧಿಕಾರಿಗಳು ಬಳಸುವ ತಮ್ಮ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮೈಸೂರು ಅಧಿಕಾರಿಗಳು ಬಾಲಕಿಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಬಳಿಕ ಬಾಲಕಿಯ ಪೋಷಕರು ಆಕೆಯನ್ನು ಗುರ್ತಿಸಿದ್ದು, ಮೇ 29 ರಂದು ಮೈಸೂರಿಗೆ ಭೇಟಿ ನೀಡಿ, ಬಾಲಕಿಯನ್ನು ಮನೆಗೆ ಕರೆತಂದಿದ್ದಾರೆ.