ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಶುಕ್ರವಾರ ಶಾಲಾ ವಿದ್ಯಾರ್ಥಿಗಳು ಹಾಗೂ ಇಸ್ರೋ ವಿಜ್ಞಾನಿಗಳೊಂದಿಗೆ ಹವ್ಯಾಸಿ ರೇಡಿಯೋ (ಹ್ಯಾಮ್ ರೇಡಿಯೋ) ಮುಖಾಂತರ ಶುಕ್ರವಾರ ಸಂವಾದ ನಡೆಸಲಿದ್ದಾರೆ.
ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಟೆಲಿಬ್ರಿಡ್ಜ್ ಮುಖಾಂತರ ಈ ಸಂವಾದ ನಡೆಸಲು ಯೋಜಿಸಿರುವುದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿನ ಹವ್ಯಾಸಿ ರೇಡಿಯೋ ಸಂಸ್ಥೆ (ಎಆರ್‌ಐಎಸ್‌ಎಸ್) ತಿಳಿಸಿದೆ.
ಭಾರತೀಯ ಕಾಲಮಾನ ಮಧ್ಯಾಹ್ನ 3:47ಕ್ಕೆ ಈ ಸಂವಾದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳೊಂದಿಗೆ ಶುಕ್ಲಾ ಅವರು 11-12 ನಿಮಿಷಗಳ ಕಾಲ ನೇರ ಸಂವಾದ ನಡೆಸಲಿದ್ದಾರೆ.
ಶುಭಾಂಶು ಅವರು ಪ್ರಶ್ನೆಗಳಿಗೆ ಉತ್ತರಿಸಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿ 15-16 ಪ್ರಶಅನೆಗಳನ್ನು ಕೇಳುವ ನಿರೀಕ್ಷೆಗಳಿವೆ. ಈ ಸಂವಾದ ಸಾರ್ವಜನಿಕವಲ್ಲ, ಆಯ್ದ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಲಿದ್ದು, ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಅವರ ಪ್ರಯೋಗಗಳು ಮುಂದುವರೆದಿದ್ದು, ಬಾಹ್ಯಾಕಾಶದ ಭವಿಷ್ಯದ ಆಹಾರ ಮೂಲವೆಂದೇ ಬಣ್ಣಿಸಲಾದ ಸೂಕ್ಷ್ಮ ಹಾವಸೆ ಪ್ರಬೇಧಗಳ ಕುರಿತು ಭಾನುವಾರದಿಂದ ಅಧ್ಯಯನ ನಡೆಸಲು ಪ್ರಾರಂಭಿಸಿದ್ದಾರೆ. ಅಲ್ಲದೆ. ನ್ಯೂರೋ ಮೋಷನ್ ವರ್ಚುವಲ್ ರಿಯಾಲಿಟಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತಹ ದತ್ತಾಂಶ ಸಂಗ್ರಹಿಸುತ್ತಿದ್ದಾರೆ.
ಹ್ಯಾಮ್ ರೇಡಿಯೋವನ್ನು ಅಧಿಕೃತವಾಗಿ ಹವ್ಯಾಸಿ ರೇಡಿಯೋ ಎಂದು ಕರೆಯಲಾಗುತ್ತದೆ. ಇದು ಪರವಾನಗಿ ಪಡೆದ ಉತ್ಸಾಹಿಗಳಿಂದ ನಿರ್ವಹಿಸಲ್ಪಡುವ ವಾಣಿಜ್ಯೇತರ ರೇಡಿಯೋ - ಸಂವಹನ ಸೇವೆಯಾಗಿದೆ ಮತ್ತು ಸಾಂಪ್ರದಾಯಿಕ ಸಂವಹನ ವಿಧಾನಗಳು ಲಭ್ಯವಿಲ್ಲದಿರುವಾಗ ವಿಪತ್ತುಗಳ ಸಮಯದಲ್ಲಿ ಸಂವಹನದ ವಿಶ್ವಾಸಾರ್ಹ ಮಾರ್ಗವೆಂದು ಪರಿಗಣಿಸಲಾಗಿದೆ.