ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದು 19 ವರ್ಷದ ಯುವಕ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯಲ್ಲಿ ಬುಧವಾರ ನಡೆದಿದೆ. ಮೃತರನ್ನು ವಿನಯ್ ಬಿ ಎಂದು ಗುರುತಿಸಲಾಗಿದ್ದು, ಪೊಲೀಸರು ಟ್ರಕ್ ಚಾಲಕ ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂಜೆ 7.30ರಿಂದ 7.40ರ ನಡುವೆ ಈ ಘಟನೆ ನಡೆದಿದೆ. ವಿನಯ್ ಕೆಂಗೇರಿಯಿಂದ ಬಿಡದಿ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಹೇಶ್ ಚಲಾಯಿಸುತ್ತಿದ್ದ ಗೂಡ್ಸ್ ಲಾರಿ( ಕೆಎ 25 ಎ 9445) ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿನಯ್ ಕೆಳಗೆ ಬಿದಿದ್ದಾರೆ. ಬೈಕ್ ಎಡಕ್ಕೆ ಬಿದ್ದರೆ, ವಿನಯ್ ಬಲಭಾಗದಲ್ಲಿ ಬಿದ್ದಿದ್ದಾರೆ.
ಲಾರಿ ಹಿಂಭಾಗದ ಎಡ ಚಕ್ರವು ಅವರನ್ನು 20 ಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದು, ತೀವ್ರ ಗಾಯಗಳಾಗಿತ್ತು. ತಲೆ, ಮುಖ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಲಾರಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.