ಬೆಂಗಳೂರು: ಬಹಳ ದಿನಗಳಿಂದ ವಿಳಂಬವಾಗಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ ದಲ್ಲಿ ಆಗಸ್ಟ್ ಆರಂಭದಲ್ಲಿ ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
19.15-ಕಿಮೀ ಉದ್ದದ ಈ ಮಾರ್ಗವು ಬೊಮ್ಮಸಂದ್ರದಿಂದ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಆರ್‌ವಿ ರಸ್ತೆಯನ್ನು ಸಂಪರ್ಕಿಸುತ್ತದೆ. ರೈಲುಗಳ ಕೊರತೆಯಿಂದಾಗಿ ಇದರ ಉದ್ಘಾಟನೆ ವಿಳಂಬವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಸ್ತುತ ಕೇವಲ ಮೂರು ರೈಲು ಹೊಂದಿದೆ. ಇವು ಪ್ರತಿ 25 ನಿಮಿಷಗಳಿಗೊಮ್ಮೆ ಚಲಿಸಲಿದ್ದು, ಎಲ್ಲಾ 16 ನಿಲ್ದಾಣಗಳಲ್ಲಿ ನಿಲ್ಲುತ್ತವೆ.
BMRCL ಈ ಮಾರ್ಗದಲ್ಲಿ ಚಾಲಕರಹಿತ ರೈಲುಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದು, ಸಿಗ್ನಲಿಂಗ್ ಪರೀಕ್ಷೆ ಮೌಲ್ಯೀಕರಿಸಲು ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಪ್ರಮಾಣೀಕರಣದ ಅಗತ್ಯವಿದೆ. ಈ ಮಾರ್ಗದ ಸಿಗ್ನಲಿಂಗ್ ಪರೀಕ್ಷೆ ಗುತ್ತಿಗೆದಾರರಾಗಿರುವ ಸೀಮೆನ್ಸ್ ಇಂಡಿಯಾ ಲಿಮಿಟೆಡ್ ನ ಸೀಮೆನ್ಸ್ AG, ISA ಪ್ರಮಾಣೀಕರಣಕ್ಕಾಗಿ ಜುಲೈ 7 ಅಥವಾ 8 ರೊಳಗೆ ಮೌಲ್ಯಮಾಪಕರಿಗೆ ಕರಡು ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ನಂತರ BMRCL ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸಲು ಮೆಟ್ರೋ ರೈಲ್ವೆ ಸುರಕ್ಷತೆ (ದಕ್ಷಿಣ ವೃತ್ತ) ಆಯುಕ್ತರನ್ನು ಸಂಪರ್ಕಿಸುತ್ತದೆ.
ಜುಲೈ 15 ರ ನಂತರ ಸುರಕ್ಷತಾ ತಪಾಸಣೆ ನಡೆಯಲಿದೆ. ಇದು ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ 16 ನಿಲ್ದಾಣಗಳಲ್ಲಿ ಹಳಿ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗುತ್ತದೆ. ಬೈಯಪ್ಪನಹಳ್ಳಿ ಡಿಪೋದಲ್ಲಿನ ಆಪರೇಷನಲ್ ಕಂಟ್ರೋಲ್ ಸೆಂಟರ್ (ಒಸಿಸಿ) ಗೆ ಭೇಟಿ ನೀಡಲು ಒಂದು ದಿನವನ್ನು ಮೀಸಲಿಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ ಅಂತ್ಯದೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಆಗಸ್ಟ್ ಮೊದಲ ವಾರದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಉದ್ಘಾಟನಾ ಸಮಾರಂಭದ ದಿನಾಂಕ ಅಡ್ಡಿಯಾಗದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಸಿಲ್ಕ್ ಬೋರ್ಡ್ ಬಳಿಯ
ಕೆಎಸ್‌ಆರ್‌ಪಿ ಮೈದಾನದಲ್ಲಿ ಸಮಾರಂಭವನ್ನು ನಡೆಸಲು ಬಿಎಂಆರ್ ಸಿಎಲ್ ಯೋಜಿಸಿದೆ.