ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರಿಂದ ಗುರುವಾರ ವಿವರಣೆ ಕೋರಿದ್ದಾರೆ.
ರವಿಕುಮಾರ್ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಮತ್ತು ಮುಖ್ಯ ಸಚೇತಕ ಸಲೀಮ್ ಅಹ್ಮದ್ ಮತ್ತು ಇತರ ಕಾಂಗ್ರೆಸ್ ಎಂಎಲ್ಸಿಗಳು ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಿ, ರವಿಕುಮಾರ್ ಅವರನ್ನು ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದರು.
ದೂರು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿಯವರು, ವಿವರಣೆ ಕೋರಿ ರವಿಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ. ಅವರ ಉತ್ತರ ಸಿಕ್ಕ ನಂತರ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರವಿಕುಮಾರ್ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಅಧಿಕಾರ ನನಗಿಲ್ಲ. ಈ ಕುರಿತು ಕಾನೂನು ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಏತನ್ಮಧ್ಯೆ, ರವಿಕುಮಾರ್ ಅವರು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಶಾಲಿನಿ ರಜನೀಶ್ ಅವರ ಬಗ್ಗೆ ಬಹಳ ಗೌರವ ಇದೆ. ಅವರ ಬಗ್ಗೆ ಯಾವುದೇ ಆಕ್ಷೇಪಾರ್ಹ ಹೇಳಿಕೆ ಕೊಟ್ಟಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಮುದ್ರಣ ಮತ್ತು ಸಾಮಾಜಿಕ ಮಾಧ್ಯಮದ ಒಂದು ವಿಭಾಗದಲ್ಲಿ ಹರಿದಾಡುತ್ತಿರುವ ವೀಡಿಯೋಗಳು ನನಗೆ ಆಘಾತವನ್ನುಂಟು ಮಾಡಿದೆ. ನಾನು ಮುಖ್ಯ ಕಾರ್ಯದರ್ಶಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಮೂರು ದಿನಗಳ ಕಾಲ ಹೈದರಾಬಾದ್‌ನಲ್ಲಿ ಅಧಿಕೃತ ಕೆಲಸದ ನಿಮಿತ್ತ ಇದ್ದೆ. ನಾನು ಯಾವುದೇ ಭಾಷಣ ಮಾಡಿಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಈ ನಡುವೆ ರವಿಕುಮಾರ್ ಅವರು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನು ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘವು ತೀವ್ರವಾಗಿ ಖಂಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯದ ಅತ್ಯುನ್ನತ ನಾಗರಿಕ ಹುದ್ದೆಯನ್ನು ಹೊಂದಿದ್ದಾರೆ. ಅವರು ಸಮಗ್ರತೆ, ಬದ್ಧತೆ ಮತ್ತು ವಿಶಿಷ್ಟ ಸಾರ್ವಜನಿಕ ಸೇವೆಗೆ ಹೆಸರುವಾಸಿಯಾದ ಗೌರವಾನ್ವಿತ ಅಧಿಕಾರಿ. ರವಿಕುಾರ್ ಅವರು ನೀಡಿರುವ ಹಸಾರ್ವಜನಿಕ ಹೇಳಿಕೆಗಳು ಅಸಭ್ಯ ಮತ್ತು ಮಾನಹಾನಿಕರವಾಗಿದ್ದು, ಇದು ಮುಖ್ಯ ಕಾರ್ಯದರ್ಶಿಗಳ ಕಚೇರಿ ಮತ್ತು ನಾಗರಿಕ ಸೇವೆಯ ಘನತೆಗೆ ಹಾನಿ ಮಾಡಿದಂತಾಗಿದೆ. ಇಂತಹ ಹೇಳಿಕೆಗಳು ಸಾರ್ವಜನಿಕ ಸಂಸ್ಥೆಗಳನ್ನು ಅವಮಾನಿಸುವುದಲ್ಲದೆ, ಅವರ ಮೇಲೆ ಹೊಂದಿರುವ ನಂಬಿಕೆಯನ್ನು ಸಹ ಕುಗ್ಗಿಸುತ್ತವೆ. ಕೂಡಲೇ ರವಿಕುಮಾರ್ ಅವರು ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.