ಬೆಂಗಳೂರು: ರಾಜ್ಯದಲ್ಲಿ ನೀರು ಕಲುಷಿತಗೊಂಡು ಯಾವುದೇ ದುಷ್ಪರಿಣಾಮಗಳಾದಲ್ಲಿ ಸಂಬಂಧಿಸಿದ ಎಂಜಿನಿಯರ್‌ಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನೇರವಾಗಿ ಹೊಣೆಯಾಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಮತ್ತು ಆರು ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಡಿಯೋ ಸಭೆ ನಡೆಸಿದ ಸಚಿವರು, ಕಲುಷಿತ ನೀರು ಸೇವನೆಯಿಂದಾದ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ ಅವರು, ಇಂತಹ ಘಟನೆಗಳಿಗೆ ಸ್ಥಳೀಯ ಎಂಜಿನಿಯರ್‌ಗಳು ಮತ್ತು ಪಿಡಿಒಗಳೇ ಜವಾಬ್ದಾರರು ಎಂದು ಸ್ಪಷ್ಟಪಡಿಸಿದರು.
ಜುಲೈ 15 ರಿಂದ ಜುಲೈ 31 ರವರೆಗೆ, ಜಿಲ್ಲಾ ಪಂಚಾಯತ್ ಸಿಇಒಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಗುಣಮಟ್ಟದ ಪರಿಶೀಲನೆಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಸ್ಥಗಿತಗೊಂಡಿರುವ ಯೋಜನೆಗಳ ಕೆಲಸ ಪುನರಾರಂಭವಾಗುವಂತೆ ನೋಡಿಕೊಳ್ಳುವಂತೆಯೂ ಅವರು ಅವರಿಗೆ ತಿಳಿಸಿದ್ದಾರೆ. ತೆಗೆದುಕೊಳ್ಳಲಾದ ಎಲ್ಲಾ ಕ್ರಮಗಳನ್ನು ವಿವರಿಸುವ ಸಮಗ್ರ ವರದಿಯನ್ನು ಆಗಸ್ಟ್ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು" ಎಂದು ಸಚಿವರು ತಿಳಿಸಿದ್ದಾರೆ.