ಬೆಳಗಾವಿ: ಬೆಳಗಾವಿ ನಗರದ ಜೋಷಿಮಾಳ್ ನಲ್ಲಿ ಒಂದೇ ಕುಟುಂಬದ ನಾಲ್ವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ಸ್ಥಿತಿ ಗಂಭೀರವಾಗಿದೆ.
ಮೃತರನ್ನು ತಾಯಿ ಸುವರ್ಣ ಕುರಡೇಕರ್, ಮಗ ಸಂತೋಷ ಕುರಡೇಕರ್ ಮತ್ತು ಮಗಳು ಮಂಗಳಾ ಕುರಡೇಕರ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಮಗಳು ಸುನಂದಾ ಕುರಡೇಕರ್ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 9 ಗಂಟೆಗೆ ಕುಟುಂಬಸ್ಥರು ವಿಷ ಸೇವಿಸಿದ್ದಾರೆ. ಗಂಭೀರವಾಗಿರುವ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಸಂತೋಷ್ ಹಾಗೂ ಕುಟುಂಬದವರು ಡೆತ್ನೋಟು ಬರೆದಿಟ್ಟಿದ್ದು, ಅದರ ಪ್ರಕಾರ, ಚೀಟಿ ವ್ಯಹಾರ ಮತ್ತು ರಾಜು ಎಂಬಾತ ಚಿನ್ನ ತೆಗೆದುಕೊಂಡು ಹೋಗಿ ವಾಪಸ್ ಕೊಡದೆ ವಂಚಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಸಂತೋಷ್ ಕುರಡೇಕರ್ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದ್ದು, ಅದರಲ್ಲಿ ನಾನು ಬಹಳಷ್ಟು ಜನರ ಬಳಿ ಚೀಟಿ ವ್ಯವಹಾರ ಮಾಡಿಸಿದ್ದೆ. ಹಲವರಿಗೆ ಈ ಚೀಟಿ ಹಣ ನೀಡಬೇಕಾಗಿತ್ತು. ವಡಗಾವಿಯ ಗೊಲ್ಡ್ ಸ್ಮಿತ್ ರಾಜು ಕುಡತರ್ಕರ್ ಬಳಿ ಚಿನ್ನ ನೀಡಿದ್ದೆ. ಬೇರೆಯವರಿಂದ ಪಡೆದು ರಾಜುಗೆ 500ಗ್ರಾಂ ಚಿನ್ನ ನೀಡಿದ್ದೆ. ವಾಪಾಸ್ ಚಿನ್ನ ಕೇಳಿದರೆ ಅವನ ಹೆಂಡತಿ ಹಾಗೂ ರಾಜು ಸೇರಿ ಧಮಕಿ ಹಾಕಿದ್ದಾರೆ. ಅದಲ್ಲದೇ ಚಿನ್ನ ತೆಗೆದುಕೊಂಡು ಊರು ಬಿಟ್ಟಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಾಜು ಮಾಡಿದ್ದಾರೆ. ಎರಡರಿಂದ ಮೂರು ಕೆಜಿ ಚಿನ್ನ ತೆಗೆದುಕೊಂಡು ಓಡಿ ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರಿಂದ ನನಗೆ ಬದುಕಲು ಕಷ್ಟವಾಗಿದೆ. ಹಲವಾರು ಜನ ನನ್ನ ಮನಗೆ ಬಂದು ಟಾರ್ಚರ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪೊಲೀಸರು ರಾಜುವಿನಿಂದ ಚಿನ್ನ ಮರಳಿ ಪಡೆದು ಜನರಿಗೆ ನೀಡಬೇಕು. ಮೋಸ ಮಾಡಿದ ರಾಜುಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ವಿನಂತಿ ಎಂದು ಪತ್ರದಲ್ಲಿ ಬರೆದಿದ್ದಾರೆ.