ಬೆಂಗಳೂರು: ನಗರದ ಉತ್ತರ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಈಡೇರಿಸಲು ಮೂರನೇ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಬೇಕು ಎಂದು ಕೇಂದ್ರ ಉದ್ಯೋಗ ಮತ್ತು ಎಂಎಸ್ ಎಂಇ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮಂಗಳವಾರ ಪತ್ರ ಬರೆದಿರುವ ಶೋಭಾ ಕರಂದ್ಲಾಜೆ, ಲಾಲ್ ಬಾಗ್ ಮತ್ತು ಮಾರತ್ ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ತೀವ್ರ ಜನ ದಟ್ಟಣೆ ಇರಲಿದ್ದು, ಧೀರ್ಘ ಹೊತ್ತು ಸರತಿ ಸಾಲಿನಲ್ಲಿ ಕಾಯಬೇಕಾಗಿದೆ ಎಂದಿದ್ದಾರೆ.
ಎರಡೂ ಕೇಂದ್ರಗಳು ಅರ್ಜಿದಾರರಿಂದ ತುಂಬಿದ್ದು, ತೀವ್ರ ವಿಳಂಬಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಬೆಂಗಳೂರು ಉತ್ತರ ವಲಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಉತ್ತರ ವಲಯದಲ್ಲಿ ಹೊಸದಾದ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಿಂದ ಜನದಟ್ಟಣೆ ಕಡಿಮೆ ಆಗಲಿದೆ ಮತ್ತು ಹೊಸ ಅರ್ಜಿ ಸ್ವೀಕಾರ, ನವೀಕರಣ ಮತ್ತು ದಾಖಲಾತಿ ಅಪ್ ಡೇಟ್ ಗಳು ಸೇರಿದಂತೆ ಪಾಸ್ ಪೋರ್ಟ್ ಸಂಬಂಧಿತ ಸೇವೆಗಳಲ್ಲಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವ ಶೋಭಾ ಕರಂದ್ಲಾಜೆ, ನೈಸ್ ರಸ್ತೆಯಲ್ಲಿ ಜುಲೈ 1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರವನ್ನು ಪುನರ್ ಪರಿಶೀಲಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.