ಮೈಸೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಹಾನಗರ ಪಾಲಿಕೆ ನೌಕರರು ನಡೆಸುತ್ತಿರುವ ಮುಷ್ಕರವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಂಬಲಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಪಾಲಿಕೆ ನೌಕರರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಷಾಢ ಶುಕ್ರವಾರದ ಪ್ರಯುಕ್ತ ಕುಟುಂಬಸ್ಥರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ಪಾಲಿಕೆ ನೌಕರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ನೌಕರರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ನಂತರ ಮಾತನಾಡಿದ ಅವರು, ಮಹಾನಗರ ಪಾಲಿಕೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಕುಂಭ ಕರ್ಣ ನಿದ್ರೆಗೆ ಜಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಬಂದು ಅಹವಾಲು ಸ್ವೀಕರಿಸದಿರುವುದು ಖಂಡನೀಯ. ಮುಂದಿನ ದಿನಗಳಲ್ಲಾದರೂ ಇವರ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು, ನೌಕರರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಟಿ ಎಸ್ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.