ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಕೆಐಎಡಿಬಿಗೆ ಭೂ ಸ್ವಾಧೀನ ವಿರೋಧಿಸಿ ರೈತರು ಕಳೆದ 1,200 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಇದೀಗ 449 ಎಕರೆ ಭೂಮಿ ನೀಡಲು ಸಿದ್ಧವಿರುವುದಾಗಿ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆಗೆ ರೂ. 3.50 ಕೋಟಿ ದರ ನಿಗದಿ ಪಡಿಸಬೇಕು. ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು. ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು. ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು ಎಂಬ ಷರತ್ತು ಹಾಕಲಾಗಿದೆ.
ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂ ಸ್ವಾಧೀನ ಪ್ರಕ್ರಿಯೆ ವಿಷಯ ಕುರಿತು ಕಾನೂನು ತಜ್ಞರ ಜೊತೆಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧದ ಎರಡು ಗುಂಪುಗಳಿದ್ದು, ಈ ಬಗ್ಗೆ ಒಮ್ಮತದ ನಿಲುವು ತೆಗೆದುಕೊಳ್ಳುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅಂತಿಮ ಅಧಿಸೂಚನೆ ಆಗಿರುವ ಹಿನ್ನೆಲೆಯಲ್ಲಿ ಮರಳಿಗೆ ರೈತರಿಗೆ ಭೂಮಿ ನೀಡಬೇಕಾದ ಸನ್ನಿವೇಶದಲ್ಲಿ ಡಿನೋಟಿಫೈ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ,ಬೈರತಿ ಸುರೇಶ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಸೇರಿದಂತೆ ಹಲವು ಕಾನೂನು ತಜ್ಞರು ಭಾಗಿಯಾಗಿದ್ದರು.