ಮಂಗಳೂರಿನ ಸುರತ್ಕಲ್ ನ MRPL ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು ಓರ್ವ ಅಸ್ವಸ್ಥಗೊಂಡಿರುವ ಘಟನೆ ಸಂಭವಿಸಿದೆ. ಎಂಆರ್ ಪಿಎಲ್ ನ OM&S ಘಟಕದ ಶೇಖರಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲಿಯಂ ರಿಫೈನರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಪಿಎಲ್ ನ ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ವಾಪಾಸ್ ಬಾರದೇ ಇದ್ದುದನ್ನು ಕಂಡು ಇನ್ನಿಬ್ಬರು ಕಾರ್ಮಿಕರು ತೆರಳಿದ್ದಾರೆ. ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ಸಂದರ್ಭ ದಾರಿ ಮಧ್ಯೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರೆ, ಓರ್ವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆರ್‌ಸಿಬಿ ಗೆಲುವಿನ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆಯ ತನಿಖೆಗೆ ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಆಯೋಗ ತನ್ನ ವರದಿಯನ್ನು ಶುಕ್ರವಾರ ಮುಖ್ಯಮಂತ್ರಿಗೆ ಸಲ್ಲಿಸಿದೆ. ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರದಿಯನ್ನು ವಿವರವಾಗಿ ಓದಿಲ್ಲ. ಆಯೋಗ ನೀಡಿದ ವರದಿಯನ್ನು ಜುಲೈ 17ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಚರ್ಚಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಇನ್ನೂ ಮುಂದುವರೆದಿದೆ.
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ನೊಟೀಸ್ ಜಾರಿ ಮಾಡಿರುವುದಕ್ಕೆ ಸ್ಪಷ್ಟೀಕರಣ ನೀಡಿರುವ ರಾಜ್ಯ ಸರ್ಕಾರ GST ಕಾನೂನುಗಳ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು UPI ಸೇವಾ ಪೂರೈಕೆದಾರರಿಂದ ಸಂಗ್ರಹಿಸಿದ ಅಂಕಿ-ಅಂಶ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಜುಲೈ 1,2017 ರಿಂದ ಜಾರಿಯಲ್ಲಿರುವ ಜಿಎಸ್‌ಟಿ ಕಾಯ್ದೆ ಪ್ರಕಾರ, ವಾರ್ಷಿಕ ವಹಿವಾಟು ಸರಕುಗಳ ವಿಭಾಗದಲ್ಲಿ 40 ಲಕ್ಷ ರೂಪಾಯಿ ಅಥವಾ ಸೇವೆಗಳಿಗೆ 20 ಲಕ್ಷ ಮೀರುವ ಪೂರೈಕೆದಾರರು ಜಿಎಸ್‌ಟಿ ತೆರಿಗೆ ವಿಧಾನಕ್ಕೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ತೆರಿಗೆ ವಿಧಿಸಬಹುದಾದ ವಸ್ತುಗಳ ಮೇಲೆ ಮಾತ್ರ ತೆರಿಗೆ ಅನ್ವಯಿಸುತ್ತಿದ್ದರೂ, ಈ ವಹಿವಾಟು ತೆರಿಗೆ ವಿಧಿಸಬಹುದಾದ ಮತ್ತು ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳಿಗೆ ಅನ್ವಯವಾಗುತ್ತದೆ. ಯುಪಿಐ ಮೂಲಕ 40 ಲಕ್ಷಕ್ಕೂ ಹೆಚ್ಚು ಪಡೆದಿದ್ದಾರೆ ಎಂದು ತೋರಿಸಿದೆ, ಈ ದತ್ತಾಂಶವನ್ನು ಆಧರಿಸಿ, ತೆರಿಗೆ ಇಲಾಖೆ ವ್ಯಾಪಾರಿಗಳಿಗೆ ನೊಟೀಸ್ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಉತ್ತರ ಕನ್ನಡದ ಗೋಕರ್ಣದ ರಾಮತೀರ್ಥದ ಅರಣ್ಯದ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ. ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟು ಪೂಜೆ ಮಾಡುತ್ತಿದ್ದರು. ಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಭೂಕುಸಿತದ ಸಾಧ್ಯತೆ ಮತ್ತು ವನ್ಯಜೀವಿಗಳ ಸಂಚಾರ ಇರುವುದರಿಂದ ಸ್ಥಳ ಸುರಕ್ಷಿತವಾಗಿಲ್ಲದ ಕಾರಣ ಮಕ್ಕಳೊಂದಿಗೆ ಹೊರಹೋಗುವಂತೆ ಪೊಲೀಸರು ಮಹಿಳೆಯ ಮನವೊಲಿಸಲು ಹರಸಾಹಸಪಟ್ಟಿದ್ದು, ಮಹಿಳೆಯ ಇಚ್ಛೆಯಂತೆ, ಆಕೆಯನ್ನು ಕುಮಟಾದ ಆಶ್ರಮಕ್ಕೆ ಕರೆದೊಯ್ಯಲಾಗಿದೆ.
ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕೊತ್ತಲವಾಡಿ ಗ್ರಾಮದ ಬಳಿಯ ಪ್ರದೇಶದ ಕಲ್ಲು ಕ್ವಾರಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಐದರಿಂದ ಆರು ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು, ವಿಷಪ್ರಾಶನ ಮಾಡಿ ಕೊಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ಪ್ರಕಾರ, ಗುರುವಾರ ಚಿರತೆಯ ಮೃತದೇಹದ ಬಳಿ ನಾಯಿ ಮತ್ತು ಕರುವಿನ ಮೃತದೇಹಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಾವು ಮಾದರಿಗಳನ್ನು ಸಂಗ್ರಹಿಸಿ ಮೈಸೂರಿನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿಗಳ ಆಧಾರದ ಮೇಲೆ, ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತಾಯಿ ಹುಲಿಯ ನಿರ್ಲಕ್ಷ್ಯದ ಪರಿಣಾಮವಾಗಿ, ಜುಲೈ 7ರಂದು ಜನಿಸಿದ್ದ ಮರಿಗಳು ಗಾಯಗೊಂಡಿದ್ದವು. ಮರಿಗಳನ್ನು ತೀವ್ರ ನಿಗಾ ಮತ್ತು ಕೈ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮರಿಗಳು ಸಾವಿಗೀಡಾಗಿವೆ.