ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯೊಂದಿಗೆ ವಿಡಿಯೋ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯೋರ್ವ ತಾನು ನೂರಾರು ಮೃತದೇಹಗಳನ್ನು ಬಲವಂತವಾಗಿ ಹೂತು ಹಾಕಿದ್ದೇನೆಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಮೀರ್ ಎಂ.ಡಿ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಒಟ್ಟು ಪ್ರಕರಣದ ಬಗ್ಗೆ ಕೃತಕ ಬುದ್ಧಿಮತ್ತೆ (AI) ರಚಿತ ಮತ್ತು ಸುಳ್ಳು ಮಾಹಿತಿಗಳನ್ನು ಒಳಗೊಂಡ ವಿಡಿಯೋವನ್ನು ಪ್ರಸಾರ ಮಾಡಿದ್ದು. ಸುಳ್ಳು ಮಾಹಿತಿಯೊಂದಿಗೆ ವೀಡಿಯೊ ಅಪ್‌ಲೋಡ್ ಮಾಡಿದ್ದಕ್ಕಾಗಿ ಸಮೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಿರಿಯ ಪತ್ರಕರ್ತ, ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಹೃದಯಾಘಾತದಿಂದ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಗಣಪತಿ ಅವರು ವಿಧಿವಶರಾಗಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆದಿದೆ. ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಗಣಪತಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ. ಕೆಬಿ ಗಣಪತಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ʼಲೈಫ್ ಅಂಡ್ ಟೈಮ್ಸ್ʼ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾದ ಅವರು ಬಾಂಬೆ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನು ಪಡೆದಿದ್ದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಇಂದು ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ತಡೆಗೋಡೆಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮನಗರ ತಾಲೂಕಿನ ಜಯಪುರಗೇಟ್ ಬಳಿ ಬೆಳಗಿನ ಜಾವ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಡವಿನಕೊಡಿ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ದುರಂತ ಸಂಭವಿಸಿದೆ.
ಉತ್ತರ ಕರ್ನಾಟಕದ ಶೈಲಿಯ ಗಾಯಕ ಮಾರುತಿ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ನಡೆದಿದೆ.22 ವರ್ಷದ ಮಾರುತಿ ಅಡಿವೆಪ್ಪ ಲಟ್ಟೇ ಈರಪ್ಪ ಎಂಬಾತನಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದ. ಗಾಯಕ 45 ಸಾವಿರ ವಾಪಸ್ ಕೊಟ್ಟಿದ್ದು 5 ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದ, ಈ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಈರಪ್ಪ ಅಕ್ಕಿವಾಟೆ ಗುಂಪು ಕಟ್ಟಿಕೊಂಡು ಮಾರುತಿ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ರಾತ್ರಿ ಬೈಕ್ ನಲ್ಲಿ ಮಾರುತಿ ಬರುವಾಗ ಈರಪ್ಪ ತಂಡ ಅಡ್ಡಗಟ್ಟಿದ್ದು ಮೊದಲಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನೆಲದ ಮೇಲೆ ಬಿದ್ದದ್ದ ಮಾರುತಿ ಮೇಲೆ ಕಾರು ಹತ್ತಿಸಿದ್ದು ಮಾರುತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಪೊಲೀಸರು ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳು ಜಂಟಿಯಾಗಿ ಬೆಂಗಳೂರಿನ ಪಬ್ಗಳ ಮೇಲೆ ದಾಳಿ ನಡೆಸಿದ್ದು, ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಬಂಧಸಿದ್ದಾರೆ. ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮಿರಾಜ್ ಪಬ್ ಮತ್ತು ಕೋರಮಂಗಲದಲ್ಲಿರುವ ಸನ್ಬರ್ನ್ ಪಬ್ ಮೇಲೆ ದಾಳಿ ಮಾಡಿ ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಮತ್ತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಎಫ್ಆರ್ಆರ್ಒ ಅಧಿಕಾರಿಗಳು ಈ ವಿದೇಶಿ ಡ್ರಗ್ ಪೆಡ್ಲರ್ಗಳ ವಿಸಾ ಅವಧಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳು ಟೆಕ್ನೋ ಪಾರ್ಟಿಗಳಿಗೆ ಡ್ರಗ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ವಿದೇಶದಿಂದ ಭಾರತಕ್ಕೆ ಓದಲು ಬಂದಿದ್ದ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆ ಬೆಂಗಳೂರಿನಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು. ಈ ಮಾಹಿತಿ ತಿಳಿದ ಸಿಸಿಬಿ ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ಡ್ರಗ್ ಪೆಡ್ಲರ್ ಪ್ರಿನ್ಸಸ್ಳನ್ನು ಬಂಧಿಸಿದ್ದರು. ಪ್ರಿನ್ಸಸ್ ಬಳಿ ಇದ್ದ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದರು.