ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಧ್ಯಾಪಕರ ನೇಮಕಾತಿಗಳಲ್ಲಿ ಮೀಸಲಾತಿ ನೀತಿಯ ಉಲ್ಲಂಘನೆಗಳ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸೂಚನೆ ನೀಡಿದ್ದಾರೆ.
ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಧ್ಯಾಪಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರು ಕುರಿತು ಪರಿಶೀಲನೆ ನಡೆಸಿ, ವರದಿ ನೀಡುವಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
ಹೊರಗಿನ ವಿಶ್ವವಿದ್ಯಾಲಯದಿಂದ ಬಂದ ಅಧ್ಯಾಪಕರ ಸೇವಾ ಹಿರಿತನ, ರೋಸ್ಟರ್ ಅನುಪಾತವನ್ನು ನಿರ್ಧರಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಧ್ಯಾಪಕರು ಕೋರಿದ್ದಾರೆ. ಹಾಗಾಗಿ, ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಬೇರೆ ವಿಶ್ವವಿದ್ಯಾಲಯಗಳಿಂದ ಹಲವು ಅಧ್ಯಾಪಕರನ್ನು ಹುದ್ದೆರಹಿತವಾಗಿ ವರ್ಗಾವಣೆ ಮಾಡಲಾಗಿದೆ. ಅವರಲ್ಲಿ ಯಾರೊಬ್ಬರೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿಲ್ಲ. ವರ್ಗಾವಣೆಯಾದವರನ್ನು ಯಾವ ರೋಸ್ಟರ್ ಬಿಂದುಗಳಿಗೆ ಸೇರಿಸಲಾಗಿದೆ ಎಂಬ ಬಗ್ಗೆ ವಿಶ್ವವಿದ್ಯಾಲಯ ನಿರ್ಧರಿಸಿಲ್ಲ. ಇದು ಸರ್ಕಾರದ ಮೀಸಲಾತಿ ನೀತಿಗೆ ವಿರುದ್ಧವಾಗಿದೆ.
ಖಾಲಿ ಇರುವ 22 ಬ್ಯಾಕ್‌ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಬಹುಸಂಖ್ಯಾತರಾಗಿರುವ ಪರಿಶಿಷ್ಟ ಸಮುದಾಯದ ಅಧ್ಯಾಪಕರ ಮಾನ್ಯತೆ ಕುಗ್ಗಿಸಲು ವಿಶ್ವವಿದ್ಯಾಲಯ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು 67 ಅಧ್ಯಾಪಕರು ದೂರು ನೀಡಿದ್ದರು.