ಮಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಹೋಗಿದ್ದ ಪತಿ ಕಾಡಿನೊಳಗೆ ಪರಪುರುಷನ ಜೊತೆ ಸರಸ ಸಲ್ಲಾಪದಲ್ಲಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಝೀನತ್ ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಾಜಾರು ನಿವಾಸಿ ರಫೀಕ್ 18 ವರ್ಷಗಳ ಹಿಂದೆ ಝೀನತ್ ಳನ್ನು ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಫೀಕ್ ಪತ್ನಿಯ ಅಕ್ರಮ ಸಂಬಂಧ ವಿಷಯ ತಿಳಿದು ಕೆಲಸ ಬಿಟ್ಟು ಗ್ರಾಮಕ್ಕೆ ವಾಪಸ್ಸಾಗಿದ್ದನು. ವಿದೇಶದಲ್ಲಿ ದುಡಿದ್ದಿದ್ದ ಹಣದಲ್ಲಿ ರಫೀಕ್ ಮನೆಯೊಂದನ್ನು ಕಟ್ಟಿಸಿದ್ದು ಅದು ಅರ್ಧಕ್ಕೆ ನಿಂತಿದ್ದು ಅದೇ ಮನೆಯಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಇನ್ನು ಪತಿ ವಿದೇಶದಲ್ಲಿದ್ದಾಗಲೇ ಝೀನತ್ ಕಳೆದ ಎರಡು ವರ್ಷಗಳಿಂದ ಅದೇ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಆರೀಸ್ ಎಂಬಾತನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ನಂಬದ ರಫೀಕ್ ಸುಮ್ಮನಾಗಿದ್ದನು.
ಆದರೆ ಇಂದು ಬೆಳಗ್ಗೆ ರಫೀಕ್ ಕೆಲಸಕ್ಕೆ ಹೋಗಿದ್ದಾನೆ. ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಿ ನೋಡಿದಾಗ ಝೀನತ್ ಮನೆಯಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ರಫೀಕ್ ಆಕೆಯನ್ನು ಹುಡುಕಿಕೊಂಡು ಕಾಡಿನೊಳಗೆ ಹೋಗಿದ್ದಾನೆ. ಅಲ್ಲಿ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಇನ್ನು ರಫೀಕ್ ನನ್ನು ನೋಡಿದ ಆರೀಸ್ ಹಾಗೂ ಝೀನತ್ ಆಟೋದಲ್ಲಿ ಪರಾರಿಯಾಗಿದ್ದರು. ನಂತರ ಮನೆಗೆ ಬಂದು ರಫೀಕ್ ಝೀನತ್ ಳಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಕೊಲೆ ಪ್ರಕರಣ ಸಂಬಂಧ ಉಪ್ಪಿನಂಗಡಿ ಪೊಲೀಸರು ಆರೋಪಿ ರಫೀಕ್ ನನ್ನು ಬಂಧಿಸಿದ್ದಾರೆ.