ರಾಜ್ಯ

News headlines 17-07-2025 | ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಗೆ 1 ವರ್ಷ ಜೈಲೇ ಗತಿ; ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಕೇಸ್: ಸರ್ಕಾರದಿಂದ ಹೈಕೋರ್ಟ್ ಗೆ ವರದಿ ಸಲ್ಲಿಕೆ; ಮಳೆ: ಕೊಪ್ಪಳದಲ್ಲಿ ಮನೆ ಕುಸಿದು ಮಗು ಸಾವು

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತ ಪ್ರಕರಣ: ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಅರ್ಜಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿ 50 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಸ್ಥಿತಿಗತಿ ವರದಿಯನ್ನು ಕರ್ನಾಟಕ ಸರ್ಕಾರ ಸಲ್ಲಿಸಿದೆ. ಹೈಕೋರ್ಟ್‌ಗೆ ಸಲ್ಲಿಸಲಾದ ವರದಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಗಂಭೀರ ಲೋಪಗಳು ಮತ್ತು ಕೆಟ್ಟ ನಿರ್ವಹಣೆಯನ್ನು ಎತ್ತಿ ತೋರಿಸಿದೆ. ಈವೆಂಟ್ ಆಯೋಜಕ ಡಿಎನ್‌ಎ ನೆಟ್ವರ್ಕ್ ಮತ್ತು ಆರ್‌ಸಿಬಿ, ಪೊಲೀಸರ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಿವೆ ಎಂದು ವರದಿ ಹೇಳುತ್ತದೆ. ಅನುಮತಿ ನಿರಾಕರಿಸಿದರೂ, ಆರ್‌ಸಿಬಿ ಅಭಿಮಾನಿಗಳು ಹಾಜರಾಗುವಂತೆ ಪ್ರೋತ್ಸಾಹಿಸುವ ವಿರಾಟ್ ಕೊಹ್ಲಿ ಅವರ ವೀಡಿಯೊ ಮನವಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯಕ್ರಮವನ್ನು ಪ್ರಚಾರ ಮಾಡಿತು. ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ಪರಿಣಾಮಕಾರಿಯಾಗಿ ಸಮನ್ವಯಗೊಳಿಸಲು ವಿಫಲವಾದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ತಂಡದ ಆಡಳಿತ ಮಂಡಳಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವನ್ನಾಗಲೀ ಅಥವಾ ಪೊಲೀಸ್ ಇಲಾಖೆಯ ಅನುಮತಿ ಪಡೆದಿರಲಿಲ್ಲ. ದಿಢೀರ್ ಕಾರ್ಯಕ್ರಮ ಘೋಷಣೆ ಮಾಡಿದ್ದರಿಂದ ಹಠಾತ್ತನೆ "ಜಮಾಯಿಸಿದ ಜನಸಮೂಹ'ನೂಕು ನುಗ್ಗಲು ಉಂಟಾಯಿತು. ಪೊಲೀಸ್ ಅಧಿಕಾರಿಗಳು 'RCB ಸೇವಕರಂತೆ' ವರ್ತಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಗೆ 1 ವರ್ಷ ಜೈಲೇ ಗತಿ!

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಕಾಫಿಫೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶವೇ ಇಲ್ಲದಂತಾಗಿದೆ. ರನ್ಯಾ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು, ಈ ವಿಷಯವನ್ನು ನಿರ್ವಹಿಸುವ ಸಲಹಾ ಮಂಡಳಿಯು ಇತ್ತೀಚೆಗೆ ರನ್ಯಾ ರಾವ್ ಅವರಿಗೆ ಅವರ ಬಂಧನದ ಸಂಪೂರ್ಣ ಅವಧಿಯಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ತೀರ್ಪು ನೀಡಿದೆ. ಕಾಯ್ದೆಯ ಅಡಿಯಲ್ಲಿ ರನ್ಯಾ ರಾವ್‌ ಹಾಗೂ ಇತರ ಆರೋಪಿಗಳು ಒಂದು ವರ್ಷ ಜೈಲಿನಿಂದ ಹೊರಬರುವ ಹಾಗಿಲ್ಲ. ಈ ಕುರಿತು ಕಾಫಿಫೋಸಾ ಸಲಹಾ ಮಂಡಳಿಯು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದೆ. ಅದರಂತೆ ಜೈಲು ಅಧೀಕ್ಷಕರಿಗೂ ಮಾಹಿತಿ ರವಾನೆ ಮಾಡಲಾಗಿದೆ.

Siddaramaiah ನಡೆಯಿಂದ ಅವಮಾನಕ್ಕೊಳಗಾಗಿದ್ದ ASP Narayana Baramani ಗೆ ಬಡ್ತಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ತಮ್ಮ ಮೇಲೆ ಕೈ ಎತ್ತಿದ್ದರಿಂದ ತೀವ್ರ ಅವಮಾನಕ್ಕೊಳಗಾಗಿ ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಅವರಿಗೆ ಬಡ್ತಿ ನೀಡಲಾಗಿದೆ. ಧಾರವಾಡ ಎಎಸ್‌ಪಿ ಆಗಿದ್ದ ಬರಮನಿ ಅವರಿಗೆ ಈಗ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್‌ ಆಯುಕ್ತ(ಡಿಸಿಪಿ) ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದ್ದು, ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ಕೆಲವು ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಸಿದ್ದರಾಮಯ್ಯನವರಿಂದ ಮುಜುಗರಕ್ಕೀಡಾಗಿದ್ದರು. ಕಾರ್ಯಕ್ರಮದ ಮಧ್ಯೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಅವರು ಯಾರು ಎಸ್‌ಪಿ ಎಂದು ಕೇಳಿ, ಕೈಎತ್ತಿ ಹೊಡೆಯಲು ಹೋಗಿದ್ದರು.

ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಶವಗಳ ಅಂತ್ಯಕ್ರಿಯೆ ಪ್ರಕರಣ: ಮಾಜಿ ಪೌರ ಕಾರ್ಮಿಕನ ಪರ ಸಿಎಂ ಗೃಹ ಸಚಿವ, ಸಿಜೆಐ ಗೆ ವಕೀಲರ ಅರ್ಜಿ

ಧರ್ಮಸ್ಥಳದಲ್ಲಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ಸಂಬಂಧ ಧರ್ಮಸ್ಥಳ ದೇವಸ್ಥಾನದ ಮಾಜಿ ಪೌರ ಕಾರ್ಮಿಕನ ಪರವಾಗಿ ವಕೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ರಾಜಿಯಾಗಿದ್ದಾರೆ, ಪೊಲೀಸರಿಂದ ಗೌಪ್ಯ ಸಾಕ್ಷಿಗಳ ಹೇಳಿಕೆ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ತನಿಖಾ ಅಧಿಕಾರಿ ಅಥವಾ ಪೊಲೀಸ್ ಇಲಾಖೆಯೊಳಗಿನ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಸಂಬಂಧವಿಲ್ಲದ ಹೊರಗಿನವರಿಗೆ ಈ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಈ ಕೃತ್ಯವು ಸಂಪೂರ್ಣ ತನಿಖೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಳೆ: ಕೊಪ್ಪಳದಲ್ಲಿ ಮನೆ ಕುಸಿದು ಮಗು ಸಾವು

ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ವರ್ಷಧಾರೆಯ ಪರಿಣಾಮ ದಕ್ಷಿಣ ಕನ್ನಡದ ಕಡಬ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ನಡುವಿನ ವಾಹನ ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಮಂಗಳೂರು- ಬೆಂಗಳೂರು, ಬೆಂಗಳೂರು-ಮಂಗಳೂರು ಸಾಗುವ ಲಾರಿ, ಬಸ್, ಟ್ರಕ್ಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಕಾರು, ಬೈಕ್ಗಳು ಬದಲಿ ಮಾರ್ಗ ಬಳಸಲು ಎಸ್ಪಿ ಡಾ.ಅರುಣ್ ಮನವಿ ಮಾಡಿದ್ದಾರೆ. ಇನ್ನು ಕೊಪ್ಪಳದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT