ಬೆಂಗಳೂರು: ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಿ-ಖಾತಾ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದ್ದು, 2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಎಲ್ಲಾ ಬಿ-ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡಲು ನಿರ್ಧಾರ ಕೈಗೊಂಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅಕ್ರಮ ಮತ್ತು ಅನಿಯಂತ್ರಿತ ಕಟ್ಟಡ ಮತ್ತು ವಿನ್ಯಾಸಗಳನ್ನು ನಿಯಂತ್ರಿಸುವಲ್ಲಿ ಶಿಸ್ತು ತರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಹೇಳಿದ್ದಾರೆ.
ಈ ಕುರಿತ ಮಾನದಂಡಗಳ ಕುರಿತು ಸರ್ಕಾರದಿಂದ ವಿವರವಾದ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ನಿರ್ಧಾರದಿಂದ ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ- ಖಾತಾದಾರರಿಗೆ ನಿರಾಳತೆ ಮೂಡಿದೆ.
ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯಿಂದ 2009 ರಿಂದ ಈಚೆಗೆ ಬಿ-ಖಾತಾ ನೀಡಲಾಗುತ್ತಿತ್ತು. ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024ರಸೆ.30 ರಂದು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ 2009 ರಿಂದ 2024ರ ಸೆ.30ರ ನಡುವೆ ನೀಡಿರುವ ಬಿ-ಖಾತಾ ಆಸ್ತಿ ಸಮಸ್ಯೆ ಪರಿಹರಿಸಲು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಬಳಿಕ ಈ ಬಿ-ಖಾತಾ ಸರ್ಕಾರದ ಸುತ್ತೋಲೆಗಳ ಆಧಾರದ ಮೇಲೆ ನೀಡಿದ್ದರೆ ಎ-ಖಾತಾ ಎಂದು ಪರಿಗಣಿಸಬಹುದು. ಇಲ್ಲದಿದ್ದರೆ ಸರಿಯಾದ ಖಾತಾ ಎಂದು ಪರಿಗಣಿಸಿ ಕಾನೂನು ಉದ್ದೇಶಕ್ಕೆ ಅಧಿಕೃತ ಎಂದು ಪರಿಗಣಿಸಬಹುದು ಎಂದು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ, ಓಸಿ ಹಾಗೂ ಸಿಸಿ ಸಮಸ್ಯೆ, ತನ್ಮೂಲಕ ಉಂಟಾಗಿದ್ದ ವಿದ್ಯುತ್ ಸಂಪರ್ಕ, ನೀರು, ಒಳಚರಂಡಿ ಸಂಪರ್ಕ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್ ಅವರು, ಬೆಂಗಳೂರಿನಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣ ಮತ್ತು ಬಡಾವಣೆ ನಿರ್ಮಿಸುತ್ತಿರುವ ಬಗ್ಗೆ ಶಿಸ್ತು ತರಲು ಸಂಪುಟದಲ್ಲಿ ಚರ್ಚಿಸಲಾಯಿತು. ನಗರದ ನಾಗರಿಕರಿಗೆ ಆಗುತ್ತಿರುವ ಅವ್ಯವಸ್ಥೆ, ಉಸಿರುಗಟ್ಟಿಸುವಂತಹ ತೊಂದರೆ ನಿವಾರಿಸಲು ಎ ಮತ್ತು ಬಿ-ಖಾತಾ ನೀಡುವುದನ್ನು ನಿಯಂತ್ರಿಸಲು ತೀರ್ಮಾನಿಸಲಾಗಿದೆ. ಬಿ-ಖಾತಾ ನೀಡಿರುವ ಆಸ್ತಿಗಳಿಗೆ ಎ- ಖಾತಾ ಅಥವಾ ಸರಿಯಾದ ಖಾತಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬಿಡಿಎ ಭೂ ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಕಾಯ್ದೆ 1984ರ ಕಲಂ 48 (1)ರಡಿಯಲ್ಲಿ ಭೂಸ್ವಾಧೀನದಿಂದ ಕೈ ಬಿಟ್ಟು ಹೊರಡಿಸಲಾದ ಅಧಿಸೂಚನೆಗಳನ್ನು (29 ಪ್ರಕರಣಗಳು) ಹಿಂಪಡೆಯಲು ತೀರ್ಮಾನಿಸಲಾಗಿದೆ.
ಐದು ಪಾಲಿಕೆಗಳ ರಚನೆಗೆ ಸಂಪುಟ ಅಸ್ತು
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಐದು ಪಾಲಿಕೆಗಳ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024-ರ ಪರಿಶೀಲಿಸಿ ವರದಿ ನೀಡಲು ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು.
ಈ ಸಮಿತಿ 3 ರಿಂದ 5 ಪಾಲಿಕೆ ರಚಿಸಬಹುದು. ನಗರ ಬೆಳೆಯುವ ಬಗ್ಗೆ ದೂರ ದೃಷ್ಟಿಯಿಂದ ಹೆಚ್ಚು ಪಾಲಿಕೆ ರಚಿಸಿದಷ್ಟೂ ಉತ್ತಮ ಎಂದು ವರದಿ ನೀಡಿತ್ತು.
ಈ ವರದಿಯನ್ನು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮಂಡಿಸಿ 5 ಪಾಲಿಕೆಗಳನ್ನು ರಚಿಸಲು ಸಂಪುಟ ಸಭೆ ತೀರ್ಮಾನಿಸಿದೆ. ಮತ್ತಿತರ ವಿಷಯಗಳ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ನಿರ್ಧರಿಸಲು ತೀರ್ಮಾನಿಸಲಾಗುತ್ತದೆ.