ಬೆಂಗಳೂರಿನಲ್ಲಿ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.ಬಿ ಖಾತಾ ಹೊಂದಿರುವ ಎಲ್ಲರಿಗೆ ಎ ಖಾತಾ ಕಾನೂನು ಮಾನ್ಯತೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಹೆಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದು, ಸರ್ಕಾರದ ಕ್ರಮದಿಂದ ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವ ಆಸ್ತಿ ಮಾಲೀಕರಿಗೆ ವಿದ್ಯುತ್, ನೀರು, ಒಳಚರಂಡಿ ಸಂಪರ್ಕ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಹೇಳಿದ್ದಾರೆ. ಕ್ರಮಬದ್ಧವಲ್ಲದ ಸೈಟ್ ಅಥವಾ ಆಸ್ತಿಗೆ ಬಿ ಖಾತಾ ನೀಡುವ ಪ್ರಕ್ರಿಯೆ ಬಿಬಿಎಂಪಿಯಲ್ಲಿ 2009 ರಿಂದ ಅಸ್ತಿತ್ವದಲ್ಲಿತ್ತು. 2024ರ ಸೆಪ್ಟೆಂಬರ್ 30 ರಿಂದ ಬಿ ಖಾತಾ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 2009 ರಿಂದ 2024ರ ಸೆಪ್ಟೆಂಬರ್ 30ರ ನಡುವೆ ಯಾರಿಗೆಲ್ಲ ಬಿ ಖಾತಾ ನೀಡಲಾಗಿದೆಯೋ ಅವರಿಗೆಲ್ಲ ಎ ಖಾತಾ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಗೌಪ್ಯವಾಗಿ ಅಂತ್ಯಸಂಸ್ಕಾರ ಮಾಡಿದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಆಗ್ರಹಿಸಿದ್ದಾರೆ. ಇದಕ್ಕೂ ಮೊದಲು ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಸದ್ಯಕ್ಕೆ SIT ರಚನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಯಾರೋ ಹೇಳಿದರೆಂದು SIT ರಚನೆ ಮಾಡಲು ಆಗುವುದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಅಗತ್ಯವಿದ್ದಲ್ಲಿ ಎಸ್. ಐ. ಟಿ ರಚನೆ ಮಾಡ್ತೀವಿ ಎಂದು ಮೈಸೂರಿನಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು 3ನೇ ಸ್ಥಾನದಲ್ಲಿದೆ. 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್ ನಗರ ದೇಶದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು 3 ರಿಂದ 10 ಲಕ್ಷ ಜನಸಂಖ್ಯೆಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಮೂರನೇ ಸ್ಥಾನಕ್ಕೆ ಭಾಜನವಾಗಿದ್ದರೆ, ರಾಜ್ಯಗಳ ಭರವಸೆಯ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ದಾವಣಗೆರೆ 15ನೇ ಸ್ಥಾನ ಪಡೆದಿದೆ. 3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣದಲ್ಲಿ ಬೆಳಗಾವಿ ಸಾಕಷ್ಟು ಸುಧಾರಣೆ ಕಂಡಿದೆ. 2023 ರಲ್ಲಿ 198 ನೇ ಸ್ಥಾನದಿಂದ, 2024-2025 ರಲ್ಲಿ ಬೆಳಗಾವಿ ನಗರ 72 ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಸುಮಾರು 50 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಅದು ಹುಸಿ ಬಾಂಬ್ ಇಮೇಲ್ ಎಂದು ಪೊಲೀಸರು ತಿಳಿಸಿದ್ದಾರೆ. 'ಶಾಲೆಯೊಳಗೆ ಬಾಂಬ್‌ಗಳು' ಎಂಬ ಶೀರ್ಷಿಕೆಯ ಒಂದೇ ರೀತಿಯ ಇಮೇಲ್ ನ್ನು ಬೆಳಿಗ್ಗೆ 7.24ಕ್ಕೆ ಶಾಲೆಗಳ ಸುಮಾರು 50 ಇಮೇಲ್ ಐಡಿಗಳಿಗೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧ್ವಂಸಕ ಕೃತ್ಯ ತಡೆ ತಂಡಗಳು ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಬಸ್ ರಸ್ತೆಬದಿಯ ಹೊಟೆಲ್ ಗೆ ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಐದು ಮಂದಿ ಗಾಯಗೊಂಡಿರುವ ಘಟನೆ ಪೀಣ್ಯದಲ್ಲಿ ನಡೆದಿದೆ. ಘಟಕ 22ರ ಬಸ್ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡ್ರೈವರ್ ಬದಲು ಕಂಡೆಕ್ಟರ್ ಬಸ್ ಚಲಾಯಿಸಲು ಹೋಗಿ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಬಸ್ ಫುಟ್ಪಾತ್ಗೆ ನುಗ್ಗಿದೆ ಎಂದು ಹೇಳಲಾಗುತ್ತಿದೆ.. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಬಸ್ ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಫುಟ್ ಪಾತ್ ನಲ್ಲಿದ್ದ ಬೀದಿ ಬದಿ ಹೋಟೆಲ್ ನಲ್ಲಿದ್ದ ಇಬ್ಬರು ಸೇರಿದಂತೆ ಐದು ಮಂದಿಗೆ ಗಾಯವಾಗಿದೆ.