ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಮಾನಿಕೆರೆ ಗ್ರಾಮದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ‘ಹೆಬ್ಬಾಳದಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿ ಪರಿಶೀಲನೆ ವೇಳೆ ಅಮಾನಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಕ್ರಮ ವಲಸಿಗರು ವಾಸಿಸುತ್ತಿರುವುದು ಗಮನಕ್ಕೆ ಬಂದಿತು. ಬಾಂಗ್ಲಾದೇಶದ ಅಂದಾಜು 3,500 ಪ್ರಜೆಗಳನ್ನು ಗುತ್ತಿಗೆದಾರರು ನಗರಕ್ಕೆ ಕರೆತಂದಿದ್ದಾರೆ.
ಅವರ ಬಳಿ ನಕಲಿ ಆಧಾರ್ ಕಾರ್ಡ್, ಗುರುತಿನ ಚೀಟಿ ಇದೆ. ಅಕ್ರಮವಾಗಿ ಶೆಡ್ ಹಾಕಿಕೊಂಡು, ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಿಯಮಬಾಹಿರವಾಗಿ ಪ್ಲಾಸ್ಟಿಕ್, ತ್ಯಾಜ್ಯವನ್ನು ಇಲ್ಲಿ ಶೇಖರಿಸಿ ಸುಡುವ ಕೆಲಸ ಮಾಡುತ್ತಿದ್ದಾರೆ. ಕಸದ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಇದು ಹೆಬ್ಬಾಳ ನಿವಾಸಿಗಳಿಗೆ ತೀವ್ರ ಆರೋಗ್ಯ ಮತ್ತು ಪರಿಸರ ಅಪಾಯಗಳನ್ನುಂಟುಮಾಡುತ್ತಿದೆ.
ಹೀಗಾಗಿ ತಕ್ಷಣ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಬೇಕು. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಕೂಡಲೇ ವಲಸಿಗರ ದಾಖಲೆ ಪರಿಶೀಲನೆ ನಡೆಸಬೇಕು. ವಲಸಿಗರನ್ನು ನಗರಕ್ಕೆ ಕರೆತಂದು, ನಕಲಿ ಆಧಾರ್, ಗುರುತಿನ ಚೀಟಿ ನೀಡಿರುವ ಗುತ್ತಿಗೆದಾರರು ಮತ್ತು ಏಜೆಂಟರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಹೆಚ್ಚುವರಿಯಾಗಿ, ಈ ಪ್ರದೇಶದಲ್ಲಿ ಕಸ ಸುಡುವುದನ್ನು ನಿಲ್ಲಿಸಲು ಮತ್ತು ಅಕ್ರಮ ಅತಿಕ್ರಮಣಗಳನ್ನು ತೆರವುಗೊಳಿಸಲು ಬಿಬಿಎಂಪಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.