ಮಂಗಳೂರು: ತನ್ನ ಐಷಾರಾಮಿ ಬಂಗಲೆ ಮೂಲಕ ತಾನೊಬ್ಬ ಉದ್ಯಮಿಯೆಂದು ಬಿಂಬಿಸಿಕೊಂಡು ನೂರಾರು ಕೋಟಿ ರೂ. ವಂಚಿಸಿದ ರೋಷನ್ ಸಲ್ಡಾನಾ(43) ಬಹುಕೋಟಿ ವಂಚನೆ ಪ್ರಕರಣವನ್ನು ಮಂಗಳವಾರ ಹೆಚ್ಚಿನ ತನಿಖೆಗಾಗಿ ಅಪರಾಧ ತನಿಖಾ ಇಲಾಖೆ(ಸಿಐಡಿ)ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಮಂಗಳೂರಿನ ಕಂಕನಾಡಿ ಬಳಿಯ ಬೊಳ್ಳಗುಡ್ಡ ಬಜಾಲ್‌ನ 43 ವರ್ಷದ ವಂಚಕ ರೋಷನ್ ಸಲ್ಡಾನಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಡಿಮೆ ಬಡ್ಡಿದರದಲ್ಲಿ ನೂರಾರು ಕೋಟಿ ರೂ. ಸಾಲ ನೀಡುವುದಾಗಿ ಭರವಸೆ ನೀಡಿ, ಅವರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ, ವಂಚನೆ ಮಾಡಿ ನಾಪತ್ತೆಯಾಗಿದ್ದ ವಂಚಕ ರೋಷನ್ ಸಲ್ಡಾನಾನನ್ನು ಕಳೆಗ ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಲ್ಡಾನಾ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 10 ಕೋಟಿ ರೂ.ಗಳಿಗೂ ಹೆಚ್ಚು ವಂಚಿಸಲಾಗಿದೆ ಎಂದು ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವು ನಕಲಿ ದಾಖಲೆಗಳ ಬಳಕೆ, ಶೆಲ್ ಕಂಪನಿಗಳು ಮತ್ತು ಹಣಕಾಸಿನ ಕುಶಲತೆಯ ಅತ್ಯಾಧುನಿಕ ವಿಧಾನಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕಾನೂನು ನಿಬಂಧನೆಗಳ ಪ್ರಕಾರ, 10 ಕೋಟಿ ರೂ.ಗಿಂತ ಹೆಚ್ಚಿನ ವಂಚನೆ ಪ್ರಕರಣಗಳು ಸಿಐಡಿ ತನಿಖೆಗೆ ಅರ್ಹವಾಗಿವೆ.
ಈ ಹಿಂದೆ ಔಪಚಾರಿಕ ವಿನಂತಿಯನ್ನು ಸಲ್ಲಿಸಲಾಗಿತ್ತು ಮತ್ತು ಈಗ ಸಿಐಡಿ ತನಿಖೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ.
ಸಲ್ಡಾನಾ ಗೋವಾ, ಬೆಂಗಳೂರು. ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಪ್ರದೇಶಗಳ ಜನರನ್ನು ವಂಚಿಸಿದ್ದಾನೆ.