ಬೆಂಗಳೂರು: ಗೋಮಾಂಸ ಸಾಗಣೆ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಗಲಗುಂಟೆ ಪೊಲೀಸರು ಗೋರಕ್ಷಕ ಮತ್ತು ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಅಲ್ಲಾಬಕ್ಷ್ ಎಂಬುವರು ನೀಡಿದ ದೂರಿನನ್ವಯ ಬಾಗಲಗುಂಟೆ ಠಾಣಾ ಪೊಲೀಸರು ಬಿಎನ್‍ಎಸ್ ಸೆಕ್ಷನ್ 115(2), 118(1), 126(2), 352, 3(5) ಅಡಿಯಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಭಾನುವಾರ ಮುಂಜಾನೆ ಬಾಗಲಗುಂಟೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಜೂನ್ 19 ರ ಮಧ್ಯರಾತ್ರಿ, ನೆಲಮಂಗಲದಿಂದ ಶಿವಾಜಿನಗರಕ್ಕೆ ಗೋಮಾಂಸ ಸಾಗಿಸುತ್ತಿದ್ದಾಗ ಅಲ್ಲಾ ಬಕ್ಷ್ (30) ಎಂಬುವವರ ವಾಹನವನ್ನು ಬಾಗಲಗುಂಟೆ ಬಳಿಯ ತುಮಕೂರು-ಬೆಂಗಳೂರು ಫ್ಲೈಓವರ್‌ನಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರು ತಡೆದಿದ್ದಾರೆ.
ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರು ಚಾಲಕನ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ಗೋಹತ್ಯೆ ತಡೆ ಮತ್ತು ದನ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದೆ.
ಇದೇ ವೇಳೆ ಹಲ್ಲೆ ನಡೆಸಿದ್ದರ ಕುರಿತು ಚಾಲಕ ದೂರು ನೀಡಿರುವ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯವರನ್ನೂ ಪೊಲೀಸರು ಬಂಧನಕ್ಕೊಳಪಡಿಸಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.