ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಮಹಿಳೆಯರು ಕಾಣೆಯಾದ ಪ್ರಕರಣ, ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಹೆಡ್ ಕಾನ್‌ಸ್ಟೆಬಲ್‌ಗಳವರೆಗೆ ವಿವಿಧ ಶ್ರೇಣಿಯ 20 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂಎ ಸಲೀಂ ಆದೇಶಿಸಿದ್ದಾರೆ.
ಮಂಗಳವಾರ ಹೊರಡಿಸಲಾದ ಆದೇಶದ ಪ್ರಕಾರ, ಎಸ್‌ಐಟಿಯಲ್ಲಿ ಎಸ್‌ಪಿ ಶ್ರೇಣಿಯ ಅಧಿಕಾರಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಐದು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಏಳು ಸಬ್ ಇನ್ಸ್‌ಪೆಕ್ಟರ್‌ಗಳು, ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ನಾಲ್ವರು ಹೆಡ್ ಕಾನ್‌ಸ್ಟೆಬಲ್‌ಗಳು ಇರುತ್ತಾರೆ.
ತಂಡದಲ್ಲಿರುವ ಅಧಿಕಾರಿಗಳು
ಮಂಗಳೂರು ಡಿಸಿಆರ್‌ಇ ಎಸ್‌ಪಿ ಸಿ.ಎ. ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿವೈಎಸ್‌ಪಿ ಎ.ಸಿ. ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿವೈಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್ ಇ.ಸಿ. ಸಂಪತ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಕುಸುಮಧರ್, ಶಿರಸಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ. ಸವಿತ್ರ ತೇಜ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್ ಶಿವಶಂಕರ್, ಉತ್ತರ ಕನ್ನಡ, ಶಿರಸಿ ಎನ್ಎಂ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಅಂಕೋಲ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆರ್. ಸುಹಾಸ್, ಉತ್ತರ ಕನ್ನಡ ಮುಂಡಗೋಡ ಸಬ್‌ಇನ್‌ಸ್ಪೆಕ್ಟರ್ ವಿನೋದ್ ಎಸ್ ಕಾಳಪ್ಪನವರ್, ಮಂಗಳೂರು ಮೆಕ್ಸಾಂ ಠಾಣೆಯ ಪಿಎಸ್ಐ ಜೆ ಗುಣಪಾಲ್, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಶುಭಾಶ್ ಕಾಮತ್, ಉಡುಪಿ ಕೌಪ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹರೀಶ್ ಬಾಬು, ಉಡುಪಿ ಮಲ್ಪೆ ವೃತ್ತದ ಹೆಡ್ ಕಾನ್‌ಸ್ಟೆಬಲ್ ಪ್ರಕಾಶ್, ಉಡುಪಿ ಕುಂದಾಪುರ ನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಎಂಎಸ್ ಹೆಡ್ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ನಿಯೋಜಿಸಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಹುಡುಗಿಯರು ಮತ್ತು ಯುವತಿಯರ ಶವಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಿದ್ದೇನೆ ಎಂದು ಹೇಳಿರುವ ಪೌರಕಾರ್ಮಿಕರೊಬ್ಬರ ಹೇಳಿಕೆಯ ಕುರಿತು ತನಿಖೆ ನಡೆಸುವಂತೆ ವಿವಿಧ ಕಡೆಗಳಿಂದ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತು.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂಎನ್ ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸದಸ್ಯರಾಗಿದ್ದಾರೆ.