ಬೆಂಗಳೂರು: ಮಹದಾಯಿ ವಿಚಾರದಲ್ಲಿ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ಮಹದಾಯಿ ನದಿ ನೀರನ್ನು ತಿರುಗಿಸುವ ಸಂಬಂಧ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕೇಂದ್ರ, ಯಾವುದೇ ಸಂದರ್ಭದಲ್ಲೂ ಮಹದಾಯಿ ಯೋಜನೆಯನ್ನು ತೆರವುಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಗೋವಾ ವಿಧಾನಸಭೆಯಲ್ಲಿ ಸಾವಂತ್ ಹೇಳಿರುವುದು "ಆಘಾತಕಾರಿ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಚ್ ಕೆ ಪಾಟೀಲ್ ಅವರು, ಮಹಾದಾಯಿ ಜಲವಿವಾದವು ಅಂತರರಾಜ್ಯ ಜಲವಿವಾದ ಕಾಯ್ದೆಯನ್ವಯ ಒಂದು ನ್ಯಾಯಾಧೀಕರಣ ರಚನೆಯಾಗಿ ಅದು ಅಂತಿಮ ತೀರ್ಪು ನೀಡಿದೆ. ಆ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಣೆಯಾಗಿ ನ್ಯಾಯಾಧೀಕರಣದ ತೀರ್ಪು ಜಾರಿಗೆ ಬಂದಿದೆ ಎಂದು ಹೇಳಿದರು.
ಯಾವುದೇ ಕಾನೂನು ಅಡೆತಡೆಗಳು ಇಲ್ಲದ ಮತ್ತು ನ್ಯಾಯಾಧೀಕರಣ ಇತ್ಯರ್ಥಪಡಿಸಲಾದ ಯೋಜನೆಗಳಿಗೆ "ಅಗತ್ಯ ಅನುಮತಿ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ" ಎಂದು ಸಚಿವರು ಆರೋಪಿಸಿದರು.
"ಉತ್ತರ ಕರ್ನಾಟಕದ ಜನರ ಮತ್ತು ರೈತರ ಹಿತಾಸಕ್ತಿ ಪರಿಗಣಿಸಿ, ಕೇಂದ್ರ ಸರ್ಕಾರವು ತಕ್ಷಣವೇ ಅನುಮೋದನೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ" ಎಂದು ಪಾಟೀಲ್ ಹೇಳಿದರು.
ಕರ್ನಾಟಕವು ಕಳಸಾ-ಬಂಡೂರಿ ಯೋಜನೆಗೆ 7.56 ಟಿ.ಎಂ.ಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ 3.90 ಟಿ.ಎಂ.ಸಿ ನೀರನ್ನು ಕರ್ನಾಟಕ ಪಾಲಿಗೆ ಹಂಚಿಕೆ ಮಾಡಿದೆ. ಅಂತರ್ ಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಾಧೀಕರಣ ಒಪ್ಪಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.