ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪವರ್ ಶೇರಿಂಗ್ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಇಂದು ಗುರುವಾರ ಅಪರಾಹ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ರಾಜ್ಯದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಕುರಿತು ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರ ಬಳಿ ಚರ್ಚಿಸಿ ಬಂದಿದ್ದರು.
ಇದೀಗ ಮತ್ತೆ ಇವತ್ತು ದೆಹಲಿಗೆ ತೆರಳಲಿದ್ದಾರೆ. ಕಳೆದ ಬಾರಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿಗೆ ಕಾಲಾವಕಾಶ ಸಿಗದೇ ಸಿಎಂ ವಾಪಸ್ ಆಗಿದ್ದರು. ಈ ಬಾರಿಯಾದರೂ ಸಿದ್ದು-ಡಿಕೆ ರಾಹುಲ್ ಗಾಂಧಿಯನ್ನು ಭೇಟಿಯಾಗುತ್ತಾರಾ ಎಂಬ ಕುತೂಹಲ ಮೂಡಿದೆ.
ಇಂದು ಸಚಿವ ಸಂಪುಟ ಸಭೆ: ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳುವ ಮುನ್ನ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಅದರಲ್ಲಿ ಯಾವೆಲ್ಲಾ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಕುತೂಹಲವಿದೆ.
ನಾಳೆ ದೆಹಲಿಯಲ್ಲಿ ಒಬಿಸಿ ಸಭೆ: ನಾಳೆ ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಒಬಿಸಿ ನಾಯಕತ್ವ ಭಾಗಿದಾರ ನ್ಯಾಯ ಸಮ್ಮೇಳನ ನಡೆಯಲಿದೆ. ರಾಹುಲ್ ಗಾಂಧಿಗೆ ನ್ಯಾಯ ಯೋಧ ಬಿರುದು ನೀಡುವ ಜೊತೆಗೆ ಮೂರು ನಿರ್ಣಯಗಳ ಬೆಂಗಳೂರು ಘೋಷಣೆ ಕೈಗೊಳ್ಳಲಾಗಿದೆ. ಸೋಮವಾರ ಮತ್ತು ಮಂಗಳವಾರ ಬೆಂಗಳೂರಲ್ಲಿ ನಡೆದ ಎಐಸಿಸಿ ಒಬಿಸಿ ಸಲಹಾ ಸಮಿತಿ ಸಭೆಯಲ್ಲಿ ಮೂರು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಡಿ ಕೆ ಶಿವಕುಮಾರ್ ದೇವಾಲಯಕ್ಕೆ ಭೇಟಿ: ಕಳೆದ ಮೂರು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ, ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದ ಡಿ ಕೆ ಶಿವಕುಮಾರ್ ನಿನ್ನೆ ಬುಧವಾರ ರಾತ್ರಿ ದಿಢೀರ್ ಹಾಸನದ ನಾಗರ ನವಿಲೆ ದೇಗುಲಕ್ಕೆ ಯಾವುದೇ ಭದ್ರತೆಯಿಲ್ಲದೆ ಏಕಾಂಗಿಯಾಗಿ ಗುಟ್ಟಾಗಿ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಏಕಾಂಗಿಯಾಗಿ ದೇವರ ದರ್ಶನ ಪಡೆದಿದ್ದಾರೆ. ಅರ್ಚನೆ, ಪೂಜೆ ಮಾಡಿಸಿ ಗಿರಿಸಿದ್ದೇಶ್ವರ ದೇವರಿಗೆ ಅಭಿಷೇಕ ಸಲ್ಲಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ಒಳಿತಾಗಲಿ ಎಂದು ಪೂಜೆ ಮಾಡಲು ಅರ್ಚಕರಿಗೆ ಹೇಳಿದ್ದಾರೆ. ನಂತರ ಸಂಕಲ್ಪವೊಂದನ್ನು ಮಾಡಿ ಪೂಜೆ ಸಲ್ಲಿಸಿ ಮರಳಿದ್ದಾರೆ.
ಎರಡು ದಿನ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದ ಅವರು, ಸದ್ದಿಲ್ಲದೇ ನಾಗದೇವರಿಗೆ ಪೂಜೆ ಸಲ್ಲಿಸಿರುವುದು ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.