ಬೆಂಗಳೂರು: ಬೆಂಗಳೂರಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಶ್ರೇಷ್ಠತಾ ಕೇಂದ್ರ(ಸಿಒಇ) ಸ್ಥಾಪನೆ ಮತ್ತು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್) ಆರಂಭ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಪ್ರಸ್ತಾವಿತ ಸ್ಪೇಸ್‌ಟೆಕ್ ಸಿಒಇ ಅನ್ನು ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ಸೆಕ್ಷನ್ 8 ಕಂಪನಿಯಾಗಿ ಸ್ಥಾಪಿಸಲಾಗುವುದು. ಇದಕ್ಕಾಗಿ ಐದು ವರ್ಷಗಳಲ್ಲಿ ಒಟ್ಟು 10 ಕೋಟಿ ರೂ. ಹಂಚಿಕೆ ಮಾಡಲಾಗುತ್ತದೆ ಎಂದರು.
ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ 20 ಕೋಟಿ ರೂ.ಗಳ ಸಿವಿಲ್ ಕಾಮಗಾರಿ ಹಾಗೂ 30 ಕೋಟಿ ರೂ. ಗಳ ಉಪಕರಣಗಳ ಖರೀದಿಯನ್ನೊಳಗೊಂಡಂತೆ ಒಟ್ಟು ರೂ. 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬ್ತುಗಳ ಒಟ್ಟಾರೆ ರೂ.62 ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಮಂಡಳಿ/ಪ್ರಾಧಿಕಾರಗಳಿಗೆ ಸಂಬಂಧಿಸಿದ 7 ಅಧಿನಿಯಮಗಳಿಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು.
ಪ್ರಸ್ತಾವಿತ ತಿದ್ದುಪಡಿ ಮಸೂದೆಗಳು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ನಾಡಪ್ರಭು ಕೆಂಪೇಗೌಡ ಪರಂಪರೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿವೆ ಎಂದು ಸಚಿವರು ತಿಳಿಸಿದರು.
ಖಾಸಗಿ ಆಂಬ್ಯುಲೆನ್ಸ್ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆಂದು ನೋಂದಾಯಿಸಲು ಅವಶ್ಯಕವಾಗಿರುವುದರಿಂದ ಮತ್ತು ಮೂವತ್ತು ದಿನಗಳೊಳಗಾಗಿ ಖಾಯಂ ನೋಂದಣಿ ನೀಡಲು ತಿದ್ದುಪಡಿಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
ತಾಂತ್ರಿಕ ವಲಯಗಳಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆ ಹೆಚ್ಚಿಸಲು LEAP (Local Economy Accelerator Program) ಯೋಜನೆಯನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ರೂ.1000 ಕೋಟಿಗಳ ಮೊತ್ತದಲ್ಲಿ (ಪ್ರತಿ ವರ್ಷ ರೂ.200.00 ಕೋಟಿಗಳು) ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.