ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲವೆಂದು ಎಂಎಲ್ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ-ಪ್ರತಿವಾದ ಬಳಿಕ ಮಧ್ಯಂತರ ತಡೆ ನೀಡಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆ ವೇಳೆ ರಾಜಕಾರಣಿಗಳು ಹೊಸ ಬಗೆಯ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಮೌಖಿಕವಾಗಿ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಲಗೇಜ್ ಟ್ರಾಲಿಯಲ್ಲಿ 3.5 ಕೆಜಿ ಚಿನ್ನದ ಬಿಸ್ಕೆಟ್ ಗಳನ್ನು ಹೊಂದಿದ್ದ ಚೀಲವನ್ನು ಇರಿಸುವ ಮೂಲಕ ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ತನ್ನ ಟ್ರಾಲಿಯಲ್ಲಿ ಆ ಬ್ಯಾಗ್ ಇರುವುದನ್ನು ನೋಡಿದ ಪ್ರಯಾಣಿಕ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ನಂತರ, ಕಸ್ಟಮ್ಸ್ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬ್ಯಾಗ್ ಇಟ್ಟ ವ್ಯಕ್ತಿಯನ್ನು ಗುರುತಿಸಲು ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ರ ಮತ್ತೊಬ್ಬ ಸ್ನೇಹಿತನನ್ನು ಕಂದಾಯ ಗುಪ್ತಚರ ಜಾರಿನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ಭರತ್ ಕುಮಾರ್ ಜೈನ್ ಬಂಧಿತನಾಗಿದ್ದು, ಈತನ ಮೂಲಕ ರನ್ಯಾ ರಾವ್‌ಗೆ ಚಿನ್ನ ಸಾಗಣೆ ಜಾಲದ ಪರಿಚಯವಾಗಿತ್ತು. ಚಿನ್ನ ಮಾರಾಟದಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದುಬಂದಿದೆ.
ಮಗನ ಸಾವಿನಿಂದ ಮನನೊಂದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ. ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಟ್ರಕ್ ಭದ್ರಾ ನದಿಗೆ ಬಿದ್ದ ಪರಿಣಾಮ ರವಿಕಲಾ ಪುತ್ರ ಶಮಂತ್ (23) ನಾಪತ್ತೆಯಾಗಿದ್ದ. ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ 10.30ರ ವೇಳೆಗೆ ಮನೆಯ ಸಮೀಪದ ಕೆರೆಗೆ ರತ್ನಕಲಾ ಹಾರಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನ ಮಾಡಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.
ತಮ್ಮ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ತೀವ್ರವಾಗಿ ಕಿಡಿಕಾರಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಂತಹ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ‘ಮಹದಾಯಿ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ಗೋವಾದವರಿಗೆ ಹಕ್ಕಿಲ್ಲ. ಏನೇ ನೋಟಿಸ್ ನೀಡಿದರೂ ನಾವು ಯೋಜನೆ ಕಾಮಗಾರಿ ಆರಂಭಿಸುತ್ತೇವೆ. ಸಾವಂತ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಸಾವಂತ್, ಯೋಜನೆ ವಿಚಾರದಲ್ಲಿ ಗೋವಾ ಸರ್ಕಾರ ಗಂಭೀರವಾಗಿದ್ದು, ಕೇಂದ್ರದೊಂದಿಗೆ ಮಾತುಕತೆ ಮುಂದುವರೆಸುತ್ತದೆ. ನಿರಾಸೆಗೊಂಡವರು ಮಾತ್ರ ಇಂತಹ ಮಾತುಗಳನ್ನಾಡಲು ಸಾಧ್ಯ ಎಂದು ಹೇಳಿದರು.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಧರ್ಮಸ್ಥಳ ಪಟ್ಟಣದ ನಿವಾಸಿಯೊಬ್ಬರು ರಾಜ್ಯ ಡಿಜಿಪಿಗೆ ಸಲ್ಲಿಸಿದ ದೂರಿನ ಮೇರೆಗೆ ಎಸ್‌ಐಟಿ ರಚಿಸಲಾಗಿದ್ದು, ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಇತರರು ಭಾಗಿಯಾಗಿರುವ ಅಕ್ರಮ ಬಂಧನ, ಕಸ್ಟಡಿ ಚಿತ್ರಹಿಂಸೆ, ಸುಲಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ಅಕ್ರಮಗಳು ಸೇರಿದಂತೆ ಗಂಭೀರ ಅಪರಾಧಗಳನ್ನು ಆರೋಪಿಸಿದ್ದಾರೆ. ದೂರುದಾರರ ಸುರಕ್ಷತೆ ಮತ್ತು ಸುಗಮ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ತಂಡವನ್ನು ಧರ್ಮಸ್ಥಳದ ಬದಲಿಗೆ ಬೆಳ್ತಂಗಡಿಯಲ್ಲಿ ಇರಿಸಲಾಗಿದೆ. ಎಸ್‌ಐಟಿ ಈಗಾಗಲೇ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದು, ಆರೋಪಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು ಶೀಘ್ರದಲ್ಲೇ ಹೇಳಿಕೆಗಳನ್ನು ದಾಖಲಿಸಲು ಯೋಜಿಸಿದೆ.