ಮೈಸೂರು: ಹುಲಿಗಳಿಗೆ ವಿಷಪ್ರಾಶನ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಮೂವರು ಆರೋಪಿಗಳನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಮತ್ತು ಬಂಡೀಪುರ ಅರಣ್ಯ ಸಂರಕ್ಷಿತ ಪ್ರದೇಶಗಳಲ್ಲಿ ಚಿರತೆಗಳು ಮತ್ತು ಮಂಗಗಳ ನಿಗೂಢ ಸಾವಿನ ಪ್ರಕರಣದ ತನಿಖೆ ಕೈಗೆತ್ತಿಕ್ಕೊಂಡಿದ್ದ ಅರಣ್ಯಾಧಿಕಾರಿಗಳು, ತನಖೆಯ ಸಾಕ್ಷ್ಯಾಧಾರಗಳ ಆಧರಿಸಿ 5 ಹುಲಿಗಳ ಸಾವಿಗೆ ಕಾರಣರಾಗಿದ್ದ ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಬಿಆರ್‌ಟಿಯ ಕೌಡಹಳ್ಳಿ ಮತ್ತು ಕೊತವಾಡಿ ಗ್ರಾಮಗಳಲ್ಲಿ ಚಿರತೆಗಳ ಸಾವು ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಕಾಂಡೇಗಾಲದಲ್ಲಿ ಮಂಗಗಳ ಸಾವಿಗೆ ಕಾರಣರಾದ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ.
ಎಫ್‌ಎಸ್‌ಎಲ್ ವರದಿಯಲ್ಲಿ ಚಿರತೆ ಹಾಗೂ ಮಂಗಗಳಿಗೆ ವಿಷಪ್ರಾಶನವಾಗಿದೆ ಎಂದು ದೃಢಪಟ್ಟರೆ ಮಾತ್ರ ತನಿಖೆ ನಡೆಸಿ, ಆರೋಪಿಗಳ ಬಂಧಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಹುಲಿಗಳ ಮಾದರಿಗಳನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರ ವರದಿಗಳು ಬಂದಿವೆ. ಮೃತ ಚಿರತೆಗಳು ಮತ್ತು ಮಂಗಗಳ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗೆ ಕನಿಷ್ಠ 15 ದಿನಗಳ ಅಗತ್ಯವಿದೆ ಎಂದು ಹೇಳಿದ್ದಾರೆ.