ಬೆಂಗಳೂರು: ರಾಜ್ಯದಲ್ಲಿ ರೈಲ್ವೆ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡುವುದಕ್ಕೆ ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕರುನಾಡಲ್ಲಿ ರೈಲ್ವೆ ಸಂಪರ್ಕ ಜಾಲವನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ.
ಬರೋಬ್ಬರಿ 42,517 ಕೋಟಿ ರೂಪಾಯಿ ವೆಚ್ಚದ 3264 ಕಿ.ಮೀ. ಉದ್ದದ 25 ಬೃಹತ್ ರೈಲ್ವೆ ಯೋಜನೆಗಳಿಗೆ ಪಿಎಂ ಮೋದಿ ಅವರ ಸರ್ಕಾರ ಮಂಜೂರಾತಿ ನೀಡಿದೆ.
ಬೃಹತ್ ಯೋಜನೆಗಳ ಮೂಲಕ ರಾಜ್ಯದ ಮೂಲೆ ಮೂಲೆಗೂ ರೈಲು ಸಂಪರ್ಕ ಕಲ್ಪಿಸುವ ದಶಕಗಳ ಕನಸು ನನಸಾಗಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದರೂ ಅಭಿವೃದ್ಧಿ ಶೂನ್ಯ ರಾಜ್ಯ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ, ಹೆಜ್ಜಾಲ-ಚಾಮರಾಜನಗರ ಹೊಸಮಾರ್ಗ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ನವರ ಸರ್ಕಾರ ಮಾತ್ರ ಒಪ್ಪಿಗೆ ಕೊಡುತ್ತಿಲ್ಲ. ಹಾಗೇ ಮೈಸೂರು– ಕುಶಾಲನಗರ, ಬೆಂಗಳೂರು– ಸತ್ಯಮಂಗಲ ರೈಲು ಯೋಜನೆಗಳಿಗೂ ರೆಡ್ ಸಿಗ್ನಲ್ ನೀಡಿದೆ ಕಾಂಗ್ರೆಸ್. ರಾಜ್ಯದ ಪಾಲಿನ ಹಣಕಾಸು, ಭೂಮಿ ನೀಡದ ಕಾಂಗ್ರೆಸ್ ಸರ್ಕಾರ ಕನ್ನಡಿಗರ ರೈಲ್ವೆ ಕನಸಿಗೆ ಮಣ್ಣೆರಚಿದೆ ಎಂದು ಟೀಕಿಸಿದೆ.
ಕೇಂದ್ರದ ಅನುದಾನದ ವಿಷಯದಲ್ಲಿ ಸದಾ ಕೊಂಕು ಮಾತನಾಡುವ ಸಿಎಂ ಸಿದ್ದರಾಮಯ್ಯನವರೇ, ಮೋದಿ ಅವರ ಸರ್ಕಾರ ಮಂಜೂರು ಮಾಡಿರುವ 25 ರೈಲ್ವೆ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಇಚ್ಛಾಶಕ್ತಿ ಇದೆಯಾ.? ಅಥವಾ ಭೂಮಿ, ರಾಜ್ಯದ ಪಾಲಿನ ಹಣ ಒದಗಿಸಲಾಗದೆ ಕನ್ನಡಿಗರ ರೈಲ್ವೆ ಕನಸಿಗೆ ಕೊಳ್ಳಿಯಿಡುವ ಸಂಚು ಮನಸ್ಸಿನಲ್ಲಿ ಸಿದ್ಧವಾಗಿದೆಯಾ? ಎಂದು ಪ್ರಶ್ನಿಸಿದೆ.