ಬೆಳಗಾವಿ: ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂಬ ಬಾಮೈದನ ಮಾತಿಗೆ ಸಿಟ್ಟಾದ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆಯೊಂದು ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಹೊನ್ನಿಹಾಳದ ಮಲ್ಲಪ್ಪ ಕಟಬುಗೋಳ (35) ಸಾವಿಗೀಡಾದವರು. ಸಾರಾಯಿ ದಾಸನಾಗಿದ್ದ ಮಲ್ಲಪ್ಪ, ಪತ್ನಿ ರೇಖಾ ಜೊತೆ ಪದೇಪದೇ ಜಗಳಕ್ಕಿಳುಯುತ್ತಿದ್ದ.
ಶುಕ್ರವಾರ ಮನೆಯಲ್ಲಿದ್ದ ಅಕ್ಕಿ ಮಾರಾಟ ಮಾಡಿ, ಸಾರಾಯಿ ಕುಡಿದು ಬಂದಿದ್ದ. ಈ ವೇಳೆ ಪತ್ನಿ ರೇಖಾ ಪತಿ ಮಲ್ಲಪ್ಪ ಜೊತೆಗೆ ಜಗಳಕ್ಕಿಳಿದಿದ್ದಳು.
ನಂತರ ಪತಿಗೆ ಬುದ್ದಿ ಹೇಳಲಿ ಎಂದು ಸಹೋದರ ಮಲ್ಲಿಕಾರ್ಜುನ್ ಬಡಕಪ್ಪನವರ್'ನನ್ನು ಮನೆಗೆ ಕರೆಸಿದ್ದಾಳೆ. ಮನೆಗೆ ಬಂದ ಮಲ್ಲಿಕಾರ್ಜುನ ಮಲ್ಲಪ್ಪ ಜೊತೆಗೆ ಜಗಳಕ್ಕಳಿದಿದ್ದು, ಮಾತಿನ ಚಕಮಕಿ ವೇಳೆ ಮಲ್ಲಪ್ಪ ಅವರಿಗೆ ಮರದ ಕೋಲಿನಿಂದ ಹೊರೆದಿದ್ದಾನೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಮಲ್ಲಪ್ಪ ಕುಡುಗೋಲು ಎತ್ತಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ ಅವರು, ನೀನು ಸತ್ತರೆ, ನನ್ನ ಸಹೋದರಿ ಚೆನ್ನಾಗಿರುತ್ತಾಳೆಂದು ಹೇಳಿದ್ದಾನೆ. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಮಲ್ಲಪ್ಪ ಕೂಡಲೇ ಕುಡುಗೋಲಿನಿಂದ ಕತ್ತು ಕೊಯ್ದುಕೊಂಡಿದ್ದಾನೆ. ಬಳಿಕ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯ ನಂತರ, ಮಲ್ಲಿಕಾರ್ಜುನ ಸ್ಥಳದಿಂದ ಪರಾರಿಯಾಗಿದ್ದನು. ಮಾರಿಹಾಳ ಪೊಲೀಸರು ತಕ್ಷಣ ಆಗಮಿಸಿ, ಆರಂಭಿಕ ತನಿಖೆ ನಡೆಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ತ್ವರಿತವಾಗಿ ಕ್ರಮ ಕೈಗೊಂಡ ಪೊಲೀಸರು, ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಿ, ನಂತರ ಮಲ್ಲಪ್ಪನ ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಅಂತಿಮ ಸಂಸ್ಕಾರಕ್ಕಾಗಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.