ಮೈಸೂರು: ನೆರೆಯ ಕೇರಳ ರಾಜ್ಯ ಮತ್ತು ಕೊಡಗಿನ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯು ಕಬಿನಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಂದ ಒಂದು ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ-ಕಪಿಲಾ ನದಿಗಳಿಗೆ ಬಿಡುಗಡೆ ಮಾಡಿದ್ದು, ಪರಿಣಾಮ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ನೀರಿನ ಮಟ್ಟ 2282.81 ಅಡಿಗೆ ತಲುಪಿದೆ. ಒಳಹರಿವು 30277 ಕ್ಯೂಸೆಕ್‌ಗಳಿಗೂ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮತ್ತು ಎಲ್ಲಾ ಉಪನದಿಗಳು ಉಕ್ಕಿ ಹರಿಯುತ್ತಿರುವುದರಿಂದ, ಒಳಹರಿವು ಯಾವುದೇ ಸಮಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನೀರಾವರಿ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಒಳಹರಿವಿನ ಮೇಲೆ ನಿಗಾ ಇಡುತ್ತಿದ್ದಾರೆ.
ಕೇರಳ ರಾಜ್ಯದ ಜಲಸಂಪನ್ಮೂಲ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ವಯನಾಡಿನ ಬಾಣಾಸುರ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳನ್ನು ತೆರೆಯಲಾಗಿದೆ. ಕಬಿನಿಯ ಹಿನ್ನೀರಿನ ಬಳಿಯಿರುವ ಹಳ್ಳಿಗಳು ನಿರಂತರ ಮಳೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿವೆ.
ಡಿ ಬಿ ಕುಪ್ಪೆ, ಮಾಚೂರು, ಕೊನೆಗದ್ದೆ ಮತ್ತು ಇತರ ಹಳ್ಳಿಗಳಲ್ಲಿ ಜನಜೀವನ ಸ್ಥಗಿತಗೊಂಡಿದೆ. ಕಬಿನಿಯಲ್ಲಿ ಡಿ ಬಿ ಕುಪ್ಪೆಯಿಂದ ಪಲ್ಪುಲಿ ಮತ್ತು ಕೇರಳ ರಾಜ್ಯದ ಇತರ ಹಳ್ಳಿಗಳಿಗೆ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ವಯನಾಡ್ ಪ್ರದೇಶದ ಒಳಭಾಗದಲ್ಲಿ ಗರಿಷ್ಠ ಮಳೆಯಾಗಿರುವುದರಿಂದ ಭಾನುವಾರ ಕಪಿಲಾ ನದಿ ಉಕ್ಕಿ ಹರಿಯುತ್ತಿರುವುದು ಕಂಡು ಬಂದಿದೆ.
ಎರಡು ವರ್ಷಗಳಿಂದ ಪ್ರವಾಹದಲ್ಲಿ ಹೆಚ್ಚು ಹಾನಿಗೊಳಗಾದ ಡಿ ಬಿ ಕುಪ್ಪೆ ಗ್ರಾಮಸ್ಥರು ತಮ್ಮ ಮನೆಗಳು ಮತ್ತು ವಸ್ತುಗಳು ಮುಳುಗಡೆಯಾಗುವ ಭಯದಿಂದ ತಗ್ಗು ಪ್ರದೇಶಗಳಿಂದ ಹತ್ತಿರದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಕೇರಳದಲ್ಲಿ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯದಲ್ಲೂ ಒಳಹರಿವು ಹೆಚ್ಚಾಗಿದೆ.
ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತವು ಒಳಹರಿವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸ್ಥಳೀಯರಿಗೆ ಕೊಳ್ಳೇಗಾಲ ತಾಲ್ಲೂಕಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆಗಳನ್ನು ನೀಡಿದ್ದಾರೆ. ನೀರಾವರಿ ಇಲಾಖೆಯು ಕಬಿನಿ ನದಿಯಲ್ಲಿ ಮೀನುಗಾರಿಕೆ ಮತ್ತು ದೋಣಿ ವಿಹಾರವನ್ನು ನಿಷೇಧಿಸಿದೆ.
ಏತನ್ಮಧ್ಯೆ, ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾದ ನಂತರ ನೀರಾವರಿ ಇಲಾಖೆಯು ಕೃಷ್ಣರಾಜ ಸಾಗರ ಜಲಾಶಯದಿಂದ 56856 ಕ್ಯೂಸೆಕ್ ನೀರನ್ನು ಹೊರಬಿಟ್ಟಿದೆ.
ಕೆಆರ್‌ಎಸ್ 124.80 ಅಡಿಗಳಷ್ಟಿದ್ದು, ಪ್ರಸ್ತುತ ನೀರಿನ ಮಟ್ಟ 123.80 ಅಡಿಗೆ ತಲುಪಿದೆ. ಒಳಹರಿವು 52683 ಕ್ಯೂಸೆಕ್‌ಗಳಷ್ಟಿದೆ. ಸಂಜೆಯ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನೀರಾವರಿ ಇಲಾಖೆಯು ಪ್ರವಾಹದ ಎಚ್ಚರಿಕೆಯನ್ನು ನೀಡಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದೆ. ಅಲ್ಲದೆ ಉಕ್ಕಿ ಹರಿಯುವ ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಏತನ್ಮಧ್ಯೆ ಕಾವೇರಿ ನದಿಯು ಉಕ್ಕಿ ಹರಿಯುತ್ತಿರುವುದರಿಂದ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಜಲಪಾತಕ್ಕೆ ನೂರಾರು ಪ್ರವಾಸಿಗರು ಆಗಮಿಸಿ, ಭೋರ್ಗರೆಯುವ ಜಲಪಾತಗಳನ್ನು ವೀಕ್ಷಿಸುತ್ತಿದ್ದಾರೆ.